ನವದೆಹಲಿ : ಸಾಲು ಸಾಲು ಪ್ರತಿಭಟನೆ, ಹಿಂಸಾಚಾರದ ಮೂಲಕವೇ ದೇಶದಲ್ಲಿ ಸುದ್ದಿಯಲ್ಲಿರುವ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾನಿಲಯದಲ್ಲಿ (ಜೆಎನ್‌ಯು) ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ಪ್ರತಿಭಟನೆ ನಡೆಸಿದರೆ ಅಂತಹ ವಿದ್ಯಾರ್ಥಿಗಳಿಗೆ 20,000 ರೂ ದಂಡ ವಿಧಿಸಬಹುದು. ಹಿಂಸಾಚಾರ ನಡೆಸಿದರೆ ಕಾಲೇಜಿನ ಪ್ರವೇಶಾತಿಯನ್ನೇ ರದ್ದುಗೊಳಿಸಿ 30,000 ರೂಪಾಯಿ ದಂಡ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಗೋದ್ರೋತ್ತರ ಹಿಂಸಾಚಾರದ ಕುರಿತು ವಿವಿಯಲ್ಲಿ ಕೆಲವು ದಿನಗಳ ಹಿಂದೆ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಗಿತ್ತು. ಈ ವಿಚಾರವಾಗಿ ವಿಶ್ವವಿದ್ಯಾನಿಲಯದಲ್ಲಿ ಭಾರಿ ಪ್ರತಿಭಟನೆ ನಡೆದು ಹಿಂಸಾಚಾರಕ್ಕೆ ತಿರುಗಿತ್ತು. ಸಾಕಷ್ಟು ಅಹಿತಕರ ಘಟನೆಗಳೂ ಸಂಭವಿಸಿದ್ದವು. ಇದರಿಂದ ಎಚ್ಚೆತ್ತ ವಿವಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಶಿಸ್ತು ಕ್ರಮ ಮತ್ತು ನಡವಳಿಕೆ ವಿಚಾರವಾಗಿ 10 ಪುಟಗಳ ನಿಯಮಗಳನ್ನು ಜಾರಿಗೊಳಿಸಿದೆ.
ವಿಶ್ವವಿದ್ಯಾನಿಲಯದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಎಕ್ಸಿಕ್ಯೂಟಿವ್ ಕೌನ್ಸಿಲ್ ಈ ನಿಯಮಗಳಿಗೆ ಒಪ್ಪಿಗೆ ನೀಡಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯದರ್ಶಿ ವಿಕಾಸ್ ಪಟೇಲ್ ಮಾತನಾಡಿ, ಹೊಸ ನಿಯಮಗಳನ್ನು ತುಘಲಕಿ ಎಂದು ವ್ಯಂಗ್ಯ ಮಾಡಿದ್ದಾರೆ. ಹಳೆಯ ನೀತಿ ಸಂಹಿತೆಯೇ ಸಾಕಷ್ಟು ಪರಿಣಾಮಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ನಿಯಮಗಳು ಪ್ರಾರಂಭವಾಗುವ ಮೊದಲು ಅಥವಾ ನಂತರ ಪ್ರವೇಶ ಪಡೆದ ಅರೆಕಾಲಿಕ ವಿದ್ಯಾರ್ಥಿಗಳೂ ಸೇರಿದಂತೆ ವಿಶ್ವವಿದ್ಯಾನಿಲಯದ ಎಲ್ಲಾ ವಿದ್ಯಾರ್ಥಿಗಳಿಗೆ ಈ ನಿಯಮಗಳು ಅನ್ವಯಿಸುತ್ತವೆ ಎಂದು ದಾಖಲಾತಿ ಹೇಳುತ್ತದೆ. ಕ್ಯಾಂಪಸ್ನಲ್ಲಿ ಜೂಜಾಟದಲ್ಲಿ ತೊಡಗುವುದು, ಹಾಸ್ಟೆಲ್ ಕೊಠಡಿಗಳನ್ನು ಅನಧಿಕೃತವಾಗಿ ಬಳಸಿಕೊಳ್ಳುವುದು, ನಿಂದನೀಯ ಮತ್ತು ಅವಹೇಳನಕಾರಿ ಭಾಷೆ ಬಳಕೆ ಮತ್ತು ಫೋರ್ಜರಿ ಸೇರಿದಂತೆ 17 ಅಪರಾಧಗಳಿಗೆ ಶಿಕ್ಷೆಗಳನ್ನು ಪಟ್ಟಿ ಮಾಡಲಾಗಿದೆ. ದೂರುಗಳ ಪ್ರತಿಯನ್ನು ಪೋಷಕರಿಗೂ ಕಳುಹಿಸಲಾಗುವುದು ಎಂದು ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಇಷ್ಟೊಂದು ಅಭದ್ರತೆ ಇದ್ದರೆ ನಾವು ಓದುವುದು ಹೇಗೆ?: ಜೆಎನ್ಯುಗೆ ಹಲ್ಲೆಗೊಳಗಾದ ತಮಿಳು ವಿದ್ಯಾರ್ಥಿಗಳ ಪ್ರಶ್ನೆ