ಗಿರಿದಿಹ್ (ಜಾರ್ಖಂಡ್): ಮಲತಾಯಿಯೊಬ್ಬಳು ತನ್ನ ಮಲಮಕ್ಕಳಿಗೆ ವಿಷಪೂರಿತ ಆಹಾರ ತಿನ್ನಿಸಿರುವ ಘಟನೆ ಗುರುವಾರ ಜಾರ್ಖಂಡ್ನ ತಿಸ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಗಡ್ಕುರಾ ಪಂಚಾಯತ್‌ನ ರೋಹಂತಂಡ್‌ನಲ್ಲಿ ನಡೆದಿದೆ. ಓರ್ವ ಮಲಮಗ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಮತ್ತೊಬ್ಬ ಚಿಂತಾಜನಕ ಸ್ಥಿತಿಯಲ್ಲಿದ್ದಾನೆ. ಮೂರನೇ ಮಗ ಊಟ ತಿನ್ನಲು ನಿರಾಕರಿಸಿ ಜೀವಂತವಾಗಿದ್ದಾನೆ.
ಸುನೀಲ್ ಸೊರೆನ್ ಅವರ ಎರಡನೇ ಹೆಂಡತಿ ಸುನೀತಾ ಹಂಸದಾ ತಮ್ಮ ಮೂವರು ಮಲಮಕ್ಕಳಿಗೆ ಚಿಕನ್ ಮತ್ತು ಅನ್ನದಲ್ಲಿ ವಿಷ ಬೆರೆಸಿ ಕೊಟ್ಟಿದ್ದಾರೆ. ವಿಷ ಮಿಶ್ರಿತ ಆಹಾರ ಸೇವಿಸಿದ ಅನಿಲ್ (3) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶಂಕರ್ (8) ಎಂಬ ಬಾಲಕ ಚಿಂತಾಜನಕ ಸ್ಥಿತಿಯಲ್ಲಿದ್ದಾನೆ. ವಿಜಯ್ (12) ಎಂಬ ಬಾಲಕ ಊಟ ಮಾಡದೇ ಬದುಕಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸುನೀತಾಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಯ ವೇಳೆ ಆಕೆ ವಿಷ ಹಾಕಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಅಧಿಕೃತ ಮೂಲಗಳ ಪ್ರಕಾರ, ಸುನೀಲ್ ಸೊರೆನ್ ಅವರ ಮೊದಲ ಪತ್ನಿ ಶೈಲೀನ್ ಮರಾಂಡಿ ಎರಡು ವರ್ಷಗಳ ಹಿಂದೆ ಹಾವು ಕಡಿತದಿಂದ ನಿಧನರಾಗಿದ್ದರು. ಅವರಿಬ್ಬರಿಗೂ ಒಂದು ಹೆಣ್ಣು ಮತ್ತು ನಾಲ್ಕು ಗಂಡು ಮಕ್ಕಳಿದ್ದವು. ಅವರ ಮೊದಲ ಹೆಂಡತಿಯ ಮರಣದ ನಂತರ ಸುನಿಲ್ ಅವರು ಸುನೀತಾ ಹಂಸದಾ ಅವರನ್ನು ವಿವಾಹವಾದರು.
ಇದನ್ನೂ ಓದಿ: ಪತ್ನಿ ಅಗಲಿಕೆ ನೋವು: ನಾಲ್ವರು ಮಕ್ಕಳಿಗೆ ವಿಷವಿಕ್ಕಿ ನಿವೃತ್ತ ಯೋಧ ಆತ್ಮಹತ್ಯೆ
ಮಕ್ಕಳ ಬಾಯಲ್ಲಿ ನೊರೆ ಬರುತ್ತಿದ್ದಂತೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿದ ಸುನೀಲ್ ಅವರ ಹಿರಿಯ ಮಗ ಸೋನು, ತನ್ನ ಚಿಕ್ಕಮ್ಮ ಅಂಜುಗೆ ಕರೆ ಮಾಡಿದ್ದಾನೆ. ನಂತರ ಅವರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಚೈಲ್ಡ್ ಲೈನ್ ನ ಜೈರಾಮ್ ಪ್ರಸಾದ್ ಹಾಗೂ ಗುಂಜಾ ಕುಮಾರಿ ಸ್ಥಳಕ್ಕೆ ಆಗಮಿಸಿ, ಶಂಕರ್‌ನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಆತನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಗಿರಿಡಿಗೆ ಕಳುಹಿಸಿದಾಗ ಅನಿಲ್ ಮೃತಪಟ್ಟಿರುವುದು ಕಂಡುಬಂದಿದೆ.