ಮುಂಬೈ: ಭಾರತದ ರಿಲಯನ್ಸ್ ಜಿಯೊ ಇನ್ಫೋಕಾಮ್ ಲಿಮಿಟೆಡ್ ಕಂಪನಿಯು ಭಾರತ ಕೇಂದ್ರೀಕೃತವಾದ, ಜಗತ್ತಿನಲ್ಲಿಯೇ ಅತಿ ಬೃಹತ್ ಆಳಸಮುದ್ರ ಕೇಬಲ್ ಜಾಲವೊಂದನ್ನು ನಿರ್ಮಿಸುತ್ತಿದೆ.
ಜಾಗತಿಕ ಮಟ್ಟದ ಕೇಬಲ್ ಪೂರೈಕೆದಾರ ಸಬ್ಕಾಮ್ ಹಾಗೂ ಇನ್ನೂ ಹಲವಾರು ಕಂಪನಿಗಳ ಸಹಯೋಗದಲ್ಲಿ ಜಿಯೊ ನೆಕ್ಸ್ಟ್ ಜನರೇಷನ್ ಸಬ್ ಮರಿನ್ ಕೇಬಲ್ ಜಾಲ ನಿರ್ಮಾಣ ಮಾಡುತ್ತಿದೆ. ಭಾರತ ಹಾಗೂ ಉಪಖಂಡದಲ್ಲಿ ಡೇಟಾ ಸೇವೆಗಳಿಗೆ ಉಂಟಾದ ಅಭೂತಪೂರ್ವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಈ ಕೇಬಲ್ ಜಾಲ ನಿರ್ಮಾಣವಾಗುತ್ತಿದೆ.
ಇಂಡಿಯಾ - ಏಶಿಯಾ - ಎಕ್ಸಪ್ರೆಸ್ ಜಾಲವು ಪೂರ್ವ ದಿಕ್ಕಿನಲ್ಲಿ ಭಾರತದೊಂದಿಗೆ ಸಿಂಗಾಪುರ ಹಾಗೂ ಅದರಾಚೆಯ ಪ್ರದೇಶಗಳನ್ನು ಸಂಪರ್ಕಿಸಲಿದ್ದು, ಇಂಡಿಯಾ-ಯುರೋಪ್-ಎಕ್ಸಪ್ರೆಸ್ ಜಾಲವು ಪಶ್ಚಿಮದಲ್ಲಿ ಮಧ್ಯ ಪ್ರಾಚ್ಯ ಹಾಗೂ ಯುರೋಪ್ ದೇಶಗಳನ್ನು ಕನೆಕ್ಟ್ ಮಾಡಲಿದೆ.
ಈ ಕೇಬಲ್ ಜಾವು ವ್ಯವಸ್ಥಿತವಾಗಿ ಇಂಟರಕನೆಕ್ಟ್ ಆಗಿರಲಿದ್ದು, ವಿಶ್ವದ ಟಾಪ್ ಇಂಟರ ಎಕ್ಸಚೇಂಜ್ಗಳ ಕೇಂದ್ರ ಹಾಗೂ ಕಂಟೆಂಟ್ ಹಬ್ಗಳನ್ನು ಕೂಡ ಸಂಪರ್ಕಿಸಲಿದೆ. ಏಷ್ಯಾ ಹಾಗೂ ಯುರೋಪ್ ಕೇಬಲ್ ಜಾಲಗಳು ಭಾರತದ ಒಳಗೆ ಮತ್ತು ಹೊರಗೆ ಕಂಟೆಂಟ್ ಪಡೆದುಕೊಳ್ಳಲು ಹಾಗೂ ಕ್ಲೌಡ್ ಸೇವೆಗಳನ್ನು ಪಡೆಯಲು ನೆರವಾಗಲಿವೆ.
ಈ ಕೇಬಲ್ ಜಾಲದಿಂದ ಫೈಬರ್ ಆಫ್ಟಿಕ್ ಟೆಲಿಕಮ್ಯೂನಿಕೇಶನ್ ಇತಿಹಾಸದಲ್ಲಿಯೇ ಭಾರತವು ಅತ್ಯಂತ ಪ್ರಮುಖ ಸ್ಥಾನವನ್ನು ಪಡೆಯಲಿದೆ. 2016 ರಲ್ಲಿ ಜಿಯೊ ತನ್ನ ಸೇವೆಗಳನ್ನು ಆರಂಭಿಸಿದ ನಂತರ ಟೆಲಿಕಾಂ ವಲಯದಲ್ಲಿ ಅದರ ಅಭೂತಪೂರ್ವ ಬೆಳವಣಿಗೆ ಹಾಗೂ ದೇಶದಲ್ಲಿ ಡೇಟಾ ಬಳಕೆಯಲ್ಲಾದ ವಿಪರೀತ ಏರಿಕೆಯ ಕಾರಣದಿಂದ ಭಾರತವು ಈಗ ವಿಶ್ವದ ಟೆಲಿಕಮ್ಯೂನಿಕೇಷನ್ ಭೂಪಟದಲ್ಲಿ ಪ್ರಮುಖ ಪಾಲುದಾರನಾಗಿ ಹೊರಹೊಮ್ಮಿದೆ.
ಜಿಯೊ ನಿರ್ಮಾಣ ಮಾಡುತ್ತಿರುವ ಕೇಬಲ್ ಜಾಲ 16,000 ಕಿಮೀ ಉದ್ದವಿರಲಿದ್ದು, 200 ಟಿಬಿಪಿಎಸ್ ಡೇಟಾ ಸಾಮರ್ಥ್ಯ ಹೊಂದಿರಲಿದೆ ಎಂದರೆ ಇದರ ಅಗಾಧತೆ ಅರ್ಥವಾಗುತ್ತದೆ.