ರಾಂಚಿ( ಜಾರ್ಖಂಡ್): ಅಕ್ರಮ ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಜಾರಿ ನಿರ್ದೇಶನಾಲಯದ ಮುಂದೆ ಇಂದೂ ವಿಚಾರಣೆಗೆ ಹಾಜರಾಗಿದ್ದು, ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಪೂಜಾ ಸಿಂಘಾಲ್ ಹೇಳಿಕೆ ದಾಖಲಿಸಿಕೊಂಡ ಇಡಿ ಅಧಿಕಾರಿಗಳು ಬಳಿಕ ಅವರನ್ನು ಬಂಧಿಸಿದ್ದಾರೆ.
ನಿನ್ನೆ ಸುಮಾರು ಒಂಬತ್ತು ಗಂಟೆಗಳ ಕಾಲ ಪೂಜಾ ಸಿಂಘಾಲ್ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ಅಪೂರ್ಣಗೊಂಡಿದ್ದರಿಂದ ಇಂದೂ ಕೂಡಾ ಅವರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಸಿಂಘಾಲ್ ಅವರ ಉದ್ಯಮಿ ಪತಿ ಅಭಿಷೇಕ್ ಝಾ ಅವರನ್ನೂ ವಿಚಾರಣೆಗೆ ಒಳಪಡಿಸಿರುವ ಅಧಿಕಾರಿಗಳು ಅವರಿಂದಲೂ ಹೇಳಿಕೆ ಪಡೆದು ದಾಖಲಿಸಿಕೊಂಡಿದ್ದರು.
ಅಕ್ರಮ ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯು ಕೋಲ್ಕತ್ತಾದಲ್ಲಿ ಮತ್ತೆ ಕೆಲ ಕಡೆ ಹೊಸದಾಗಿ ದಾಳಿಗಳನ್ನು ನಡೆಸಿದೆ. ಮೇ 6ರಂದು ಜಾರ್ಖಂಡ್ ಮತ್ತು ಇತರ ಕೆಲವು ಸ್ಥಳಗಳಲ್ಲಿ ಅಧಿಕಾರಿಗಳು, ಅವರ ಪತಿ, ಅವರ ಸಂಬಂಧಿತ ಘಟಕಗಳು ಮತ್ತು ಇತರರ ವಿರುದ್ಧ ಇಡಿ ದಾಳಿ ನಡೆಸಿತ್ತು. ಇದೀಗ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಮುಂದುವರಿದ ದಾಳಿ: ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಪ್ರಕರಣದಲ್ಲಿ ಇಡಿ ದಾಳಿ ಮುಂದುವರಿದಿದೆ. ಸಿಕ್ಕಿರುವ ಸುದ್ದಿಗಳ ಪ್ರಕಾರ, ಕೋಲ್ಕತ್ತಾದ ಕೆಲವು ಸ್ಥಳಗಳಲ್ಲಿ ಇಡಿ ದಾಳಿ ನಡೆಸುತ್ತಿದೆ. ಸುದ್ದಿ ಪ್ರಕಾರ, ಕೋಲ್ಕತ್ತಾದ ದೊಡ್ಡ ಉದ್ಯಮಿ ಅಭಿಜಿತ್ ಸೇನ್ ಅವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹಣ ದುರುಪಯೋಗದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಇಂದು ಮುಂಜಾನೆ ಕೋಲ್ಕತ್ತಾದ ನಾಲ್ಕು ಸ್ಥಳಗಳ ಮೇಲೆ ದಾಳಿ ಮಾಡಿದೆ. ಉದ್ಯಮಿ ಅಭಿಜಿತ್ ಸೇನ್ ಅವರ ಕಚೇರಿ ಮತ್ತು ಮನೆ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಜೋಧ್‌ಪುರ ಪಾರ್ಕ್‌ನಲ್ಲಿರುವ ಮನೆ ಸಂಖ್ಯೆ 133, ಜೋಧ್‌ಪುರ ಪಾರ್ಕ್‌ನಲ್ಲಿರುವ ಮನೆ ನಂ. 362, ಸೌತ್ ಸಿಟಿ ಹೌಸಿಂಗ್‌ನ ಟವರ್ ನಂ. 2 ರಲ್ಲಿ ಫ್ಲಾಟ್ ನಂ. 34 ಜಿ ಮತ್ತು ಜೋಧ್‌ಪುರ ಪಾರ್ಕ್‌ನಲ್ಲಿರುವ ಮನೆ ಸಂಖ್ಯೆ 17 ರ ಕಚೇರಿಗಳಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಕಳೆದ ಕೆಲ ದಿನಗಳ ಹಿಂದೆ ಜಾರ್ಖಂಡ್ನ ಹಿರಿಯ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಮತ್ತು ಅವರ ಪತಿ ನಿವಾಸಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ 19.31 ಕೋಟಿ ರೂ. ನಗದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ವಿಚಾರಣೆಗೊಳಪಡುವಂತೆ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.
2000ನೇ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಪೂಜಾ ಸಿಂಘಾಲ್, ಜಾರ್ಖಂಡ್ನ ಗಣಿ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಜೂನಿಯರ್ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ವೇಳೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಣ ವಂಚಿಸಿರುವ ಆರೋಪವಿದೆ.
2008 ರಿಂದ 11ರ ಅವಧಿಯಲ್ಲಿ ಜಾರ್ಖಂಡ್ನ ಖುಂತಿ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 18 ಕೋಟಿ ರೂ.ಗೂ ಹೆಚ್ಚು ಹಣ ದುರುಪಯೋಗಪಡಿಸಿಕೊಂಡ ಆರೋಪ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಇಡಿ ತನಿಖೆ ನಡೆಸುತ್ತಿದೆ. ಹೀಗಾಗಿ ಗಣಿಗಾರಿಕೆ ಕಾರ್ಯದರ್ಶಿ ಪೂಜಾ ಸಿಂಘಾಲ್ ನಿವಾಸ ಸೇರಿ ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಒಟ್ಟಾರೆ 18 ಕಡೆಗಳಲ್ಲಿ ದಾಳಿ ಮಾಡಿ ದಾಖಲೆಗಳ ಪರಿಶೀಲಿಸಲಾಗಿತ್ತು.
ಇದನ್ನು ಓದಿ:ಮದುವೆಗೆ ಎರಡು ದಿನ ಬಾಕಿ.. ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಸಿಕ್ಕಿಬಿದ್ದ ವಾಯುಸೇನೆ ನೌಕರ