ರಾಂಚಿ (ಜಾರ್ಖಂಡ್): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಮೋದಿ ಮತ್ತು ಅಮಿತ್ ಶಾ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಜಾರ್ಖಂಡ್ ನ್ಯಾಯಾಲಯಗಳಲ್ಲಿ ರಾಹುಲ್ ವಿರುದ್ಧ ಮೂರು ಅರ್ಜಿಗಳು ಸಲ್ಲಿಕೆಯಾಗಿದ್ದು, ಏಪ್ರಿಲ್ನಲ್ಲಿ ಇವುಗಳ ವಿಚಾರಣೆಗೆ ಬರಲಿವೆ. ಇದರಲ್ಲಿ ಒಂದು ಪ್ರಕರಣ ವಿಚಾರಣೆಯು ಏಪ್ರಿಲ್ 1ರಂದು ನಡೆಯಲಿದೆ.
ಇದನ್ನೂ ಓದಿ: ಮೋದಿ ಉಪನಾಮ ಪ್ರಕರಣ: ಏ.12 ರಂದು ಪಾಟ್ನಾ ಕೋರ್ಟ್ಗೆ ಹಾಜರಾಗಲಿರುವ ರಾಹುಲ್ ಗಾಂಧಿ
ಮೋದಿ ಉಪನಾಮದ ಬಗ್ಗೆ ವಿವಾದಿತ ಹೇಳಿಕೆ ಕುರಿತಾಗಿ ರಾಹುಲ್ ಗಾಂಧಿ ವಿರುದ್ಧ ಪ್ರದೀಪ್ ಮೋದಿ ಎಂಬುವವರು ಮಾನನಷ್ಟ ಮೊಕದ್ದಮೆ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆಯು ರಾಂಚಿಯ ಕೆಳ ನ್ಯಾಯಾಲಯದಲ್ಲಿ ಏಪ್ರಿಲ್ 1ರಂದು ನಡೆಯಲಿದೆ. ಇದೇ ಪ್ರಕರಣದಲ್ಲಿ ಈ ಹಿಂದೆ ಜನವರಿ 17ರಂದು ರಾಹುಲ್ ಗಾಂಧಿ ಸಮನ್ಸ್ ಜಾರಿ ಮಾಡಲಾಗಿತ್ತು. ಇದಾದ ನಂತರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಜಾರ್ಖಂಡ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಈ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಹೈಕೋರ್ಟ್‌ನಿಂದ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಕೆಳ ನ್ಯಾಯಾಲಯದಲ್ಲಿ ಈ ವಿಚಾರಣೆ ಆರಂಭವಾಗಿದೆ.
ಅಮಿತ್ ಶಾ ಕುರಿತ ಹೇಳಿಕೆ ಸಂಬಂಧ ಎರಡು ಅರ್ಜಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ಸಂಬಂಧ ಎರಡು ಪ್ರತ್ಯೇಕ ಅರ್ಜಿಗಳು ಸಹ ದಾಖಲಿಸಲಾಗಿದೆ. ರಾಂಚಿ ಎಂಪಿ-ಎಂಎಲ್ಎ ನ್ಯಾಯಾಲಯದಲ್ಲಿ ನವೀನ್ ಝಾ ಮತ್ತು ಚೈಬಾಸಾ ನ್ಯಾಯಾಲಯದಲ್ಲಿ ಪ್ರದೀಪ್ ಕುಮಾರ್ ಎಂಬುವವರು ಈ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪ್ರಕರಣಗಳ ವಿಚಾರಣೆ ಕೂಡ ಏಪ್ರಿಲ್ ಮೊದಲ ವಾರದಲ್ಲಿ ನ್ಯಾಯಾಲಯಗಳಲ್ಲಿ ನಡೆಯಲಿದೆ.
ಇದನ್ನೂ ಓದಿ: ವಯನಾಡ್ಗೆ ಉಪಚುನಾವಣೆ, ರಾಹುಲ್ ದೆಹಲಿ ಬಂಗಲೆ ಖಾಲಿ?: ಕೋರ್ಟ್ ಆದೇಶ - ಅನರ್ಹತೆ ಪರಿಣಾಮಗಳೇನು?
2018ರ ಕಾಂಗ್ರೆಸ್ ಅಧಿವೇಶನದಲ್ಲಿ ಅಮಿತ್ ಶಾ ಕುರಿತಂತೆ ಕೊಲೆಗಾರ ಎಂಬ ಪದವನ್ನು ರಾಹುಲ್ ಗಾಂಧಿ ಬಳಸಿದ್ದರು ಎಂದು ಹೇಳಲಾಗಿದೆ. ಈ ಸಂಬಂಧ ಎರಡು ಪ್ರಕರಣಗಳು ದಾಖಲಾಗಿವೆ. ನವೀನ್ ಝಾ ದಾಖಲಿಸಿದ ಪ್ರಕರಣದಲ್ಲಿ ರಾಂಚಿ ನ್ಯಾಯಾಲಯವು ಈ ಹಿಂದೆ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಇದನ್ನೂ ಕೂಡ ಜಾರ್ಖಂಡ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಈ ವೇಳೆ ಅರ್ಜಿದಾರ ನವೀನ್ ಝಾ ಅವರು ಉತ್ತರ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಇದಕ್ಕೆ ನ್ಯಾಯಮೂರ್ತಿಗಳು ಅನುಮತಿ ಕೊಟ್ಟಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 5ರಂದು ನಿಗದಿಯಾಗಿದೆ.
ಮತ್ತೊಂದೆಡೆ, ಚೈಬಾಸಾ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣದ ವಿರುದ್ಧವೂ ಜಾರ್ಖಂಡ್ ಹೈಕೋರ್ಟ್‌ನಲ್ಲಿ ದೂರು ದಾಖಲಾಗಿದೆ. ಈ ಕುರಿತು ಹೈಕೋರ್ಟ್ ನಿರ್ದೇಶನ ಇನ್ನಷ್ಟೇ ಬರಬೇಕಿದೆ. ಆದರೆ, ಇದರ ವಿಚಾರಣೆ ಕೂಡ ಏಪ್ರಿಲ್ 3ರಂದು ನಗದಿ ಮಾಡಲಾಗಿದೆ. ಇನ್ನು, ಮೋದಿ ಉಪನಾಮದ ಬಗ್ಗೆ ವಿವಾದಿತ ಹೇಳಿಕೆ ಕುರಿತಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಇತ್ತೀಚೆಗೆ ರಾಹುಲ್ ಗಾಂಧಿ ಅವರನ್ನು ಗುಜರಾತ್ನ ಸೂರತ್ ನ್ಯಾಯಾಲಯವು ದೋಷಿ ಪ್ರಕಟಿಸಿದೆ. ಇದರ ಬೆನ್ನಲ್ಲೇ, ಲೋಕಸಭೆಯಿಂದ ರಾಹುಲ್ ಗಾಂಧಿ ಅನರ್ಹಗೊಳಿಸಲಾಗಿದೆ.
ಇದನ್ನೂ ಓದಿ: ಈ ಅಹಂಕಾರಿ ರಾಜನಿಗೆ ಜನತೆ ಉತ್ತರ ಕೊಡುತ್ತಾರೆ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ