ರಾಮಗಢ/ಜಾರ್ಖಂಡ್ : ಮನೆಗೆ ನುಗ್ಗಿ ಜಾರ್ಖಂಡ್‌ನ ರಾಮಗಢ ಜಿಲ್ಲೆಯ ಕಾಂಗ್ರೆಸ್ ನಾಯಕ ಕಮಲೇಶ್ ನಾರಾಯಣ್ ಶರ್ಮಾ(60) ಅವರನ್ನು ಕೊಲೆ ಮಾಡಲಾಗಿದೆ. ಹಾಗೂ ಅವರ ಪತ್ನಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಅಪರಿಚಿತರು ಭುರ್ಕುಂದ ಪೊಲೀಸ್ ಚೌಕಿಯ ಸೆಂಟ್ರಲ್ ಸೌಂಡಾ ಕಾಲೋನಿಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಮಲೇಶ್ ನಾರಾಯಣ್ ಶರ್ಮಾ ಅವರ ನಿವಾಸಕ್ಕೆ ಕಿಟಕಿಯ ಮೂಲಕ ಪ್ರವೇಶಿಸಿ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾರೆ ಮತ್ತು ಕಮಲೇಶ್ ಪತ್ನಿ ಚಂಚಲಾ ಶರ್ಮಾ ಅವರನ್ನು ತೀವ್ರವಾಗಿ ಗಾಯಗೊಳಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಅಂತಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡಿರುವ ಚಂಚಲಾ ಶರ್ಮಾ(55)ಅವರನ್ನು ರಾಂಚಿಯ ರಾಜೇಂದ್ರ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ರಿಮ್ಸ್)ಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಚುರುಕುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾತ್ ಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರೊಂದಿಗೆ ಮಾತನಾಡುವುದಾಗಿ ಮತ್ತು ಹತ್ಯೆಯ ಕುರಿತು ಸಿಐಡಿ ತನಿಖೆಗೆ ನೀಡುವಂತೆ ಒತ್ತಾಯಿಸುವುದಾಗಿ ಹೇಳಿದ್ದಾರೆ. ದುಷ್ಕರ್ಮಿಗಳನ್ನು ಆದಷ್ಟು ಬೇಗ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅಂಬಾ ಪ್ರಸಾದ್ ಆಗ್ರಹಿಸಿದ್ದಾರೆ.