ಪಾಟ್ನಾ: ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಮಾರಕಾಸ್ತ್ರಗಳೊಂದಿಗೆ ಹಾಡಹಗಲೇ ಆಭರಣ ಮಳಿಗೆಯೊಂದಕ್ಕೆ ನುಗ್ಗಿದ ನಾಲ್ವರು ಖದೀಮರು ಸುಮಾರು 1 ಕೋಟಿಗೂ ಹೆಚ್ಚು ರೂ. ಮೌಲ್ಯದ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳನ್ನು ದೋಚಿ ಪಾರಾರಿಯಾಗಿರುವ ಘಟನೆ ಪಾಟ್ನಾದ ಬಕರ್‌ಗಂಜ್ ಮಾರುಕಟ್ಟೆ ಬಳಿ ಶುಕ್ರವಾರ ನಡೆದಿದೆ.
ಮಾಸ್ಕ್ ಧರಿಸಿ ಸಾಮಾನ್ಯ ಗ್ರಾಹಕರಂತೆ ಎಸ್ಎಸ್ ಜ್ಯುವೆಲರ್ಸ್ ಅಂಗಡಿಗೆ ಬಂದ ಕಳ್ಳರು, ಮೊದಲು ಬಂದೂಕು ತೋರಿಸಿ ಜ್ಯುವೆಲರ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಬೆದರಿಸಿದ್ದಾರೆ. ನಂತರ ಎಲ್ಲ ಆಭರಣಗಳನ್ನು ಕಾಟನ್ ಬ್ಯಾಗ್‌ಗಳಲ್ಲಿ ಹಾಕುವಂತೆ ಸೂಚಿಸಿ, ಬೈಕ್ನಲ್ಲಿ ಪಾರಾರಿಯಾಗಿದ್ದಾರೆ ಎಂದು ಜ್ಯುವೆಲರ್ಸ್ ಮಾಲೀಕ ವಿಜಯ್ ಪ್ರಸಾದ್ ತಿಳಿಸಿದ್ದಾರೆ.
ದರೋಡೆ ನಂತರ ಉದ್ಯೋಗಿಗಳು ಸಹಾಯಕ್ಕಾಗಿ ಜೋರಾಗಿ ಕಿರುಚಾಡಿದರು. ಈ ವೇಳೆ, ಇತರ ಅಂಗಡಿಗಳ ಮಾಲೀಕರು ಸಹಾಯಕ್ಕೆ ಧಾವಿಸಿ, ಖದೀಮರ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದರು. ಈ ವೇಳೆ, ಒಬ್ಬ ದರೋಡೆಕೋರನಿಗೆ ಗಾಯಗಳಾಗಿದ್ದು, ಸ್ಥಳೀಯ ವ್ಯಾಪಾರಿಗಳು ಅವನನ್ನು ವಶಕ್ಕೆ ಪಡೆದರು. ಉಳಿದ ಮೂವರು ಪರಾರಿಯಾಗಿದ್ದಾರೆ. ಘಟನೆ ನಡೆದ 45 ನಿಮಿಷಗಳ ನಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ವಿಜಯ್ ಹೇಳಿದ್ದಾರೆ.
ಘಟನೆಯ ನಂತರ ಅಂಗಡಿ ಮಾಲೀಕರು ತಮ್ಮ ಮಳಿಗೆಗಳನ್ನು ಮುಚ್ಚಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಹಾಗೂ ಕಳ್ಳರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ