ನವದೆಹಲಿ: ಮುಂದಿನ ಲೋಕಸಭೆ ಚುನಾವಣೆಗೆ ಜನತಾ ದಳ (ಜಾತ್ಯತೀತ) ಮತ್ತು ಬಿಜೆಪಿ ಮಾಡಿಕೊಂಡಿರುವ ಮೈತ್ರಿಗೆ ಆರಂಭದಲ್ಲೇ ವಿಘ್ನ ಶುರುವಾಗಿದೆ. ಮೈತ್ರಿ ಪ್ರಕಟವಾದ ಕೆಲವೇ ದಿನಗಳಲ್ಲಿ ಹಲವಾರು ಮುಸ್ಲಿಂ ನಾಯಕರು ಜೆಡಿಎಸ್ ತೊರೆದಿದ್ದಾರೆ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.
ಈ ಹೊಂದಾಣಿಕೆ ಮುಂದಿನ ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತವಾಗಿದ್ದು, ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜೆಡಿಎಸ್-ಬಿಜೆಪಿ ಮೈತ್ರಿ ಚುನಾವಣೆಯಲ್ಲೂ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಎಐಸಿಸಿ ಕರ್ನಾಟಕ ಉಸ್ತುವಾರಿ ಕಾರ್ಯದರ್ಶಿ ಅಭಿಷೇಕ್ ದತ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ರಾಜೀನಾಮೆಗೆ ಮುಂದಾದ ಮುಸ್ಲಿಂ ಮುಖಂಡರು: ವರದಿಗಳ ಪ್ರಕಾರ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಶಾಹಿದ್ ನೇತೃತ್ವದ ಅಲ್ಪಸಂಖ್ಯಾತರ ವಿಭಾಗ ಸೇರಿದಂತೆ ಮೈಸೂರು ನಗರದ ಜೆಡಿಎಸ್ ಘಟಕದ 60ಕ್ಕೂ ಹೆಚ್ಚು ಪದಾಧಿಕಾರಿಗಳು ಪಕ್ಷಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಮೈತ್ರಿ ಅಧಿಕೃತವಾಗಿ ಘೋಷಣೆಯಾದ ಕೆಲವೇ ದಿನಗಳಲ್ಲಿ ಪ್ರಧಾನ ಕಾರ್ಯದರ್ಶಿ ಮತ್ತು ಶಿವಮೊಗ್ಗ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮಾಧ್ಯಮ ವಕ್ತಾರರು ಸೇರಿದಂತೆ ಹತ್ತಾರು ಜೆಡಿಎಸ್ ಮುಸ್ಲಿಂ ಮುಖಂಡರು ರಾಜೀನಾಮೆ ನೀಡಿದ್ದಾರೆ. ದೇವದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತುಮಕೂರು ಗ್ರಾಮಾಂತರ ಜೆಡಿಎಸ್ ಮಾಜಿ ಶಾಸಕ ಗೌರಿ ಶಂಕರ್ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಬಿಜೆಪಿ ಜೊತೆ ಕೈಜೋಡಿಸಿರುವ ಜೆಡಿಎಸ್ ನಡೆಯಿಂದಾಗಿ ಮುಸ್ಲಿಂ ಮುಖಂಡರು ಹತಾಶೆಗೊಂಡಿದ್ದಾರೆ. ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಮತಗಳಿಕೆ ಕುಸಿದಿದ್ದು, ಬಿಜೆಪಿಯ ಜೊತೆಗೆ ಲೋಕಸಭಾ ಕಣಕ್ಕಿಳಿಸಲು ಯತ್ನಿಸುತ್ತಿದೆ. ಆದರೆ, ಈ ಹೊಂದಾಣಿಕೆ ಎರಡೂ ಪಕ್ಷಗಳಿಗೆ ನೆರವಾಗುವುದಿಲ್ಲ. ವಾಸ್ತವವಾಗಿ, ಇದು ಕಾಂಗ್ರೆಸ್‌ಗೇ ಪ್ಲಸ್ ಆಗಲಿದೆ ಎಂದು ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಪ್ರಕಾಶ್ ರಾಥೋಡ್ ತಿಳಿಸಿದರು.
ಕುಟುಂಬದ ಪಕ್ಷದೊಂದಿಗೆ ಸಾಥ್: ಜೆಡಿಎಸ್ ಅವಕಾಶವಾದಿ ಪಕ್ಷ. ಜಾತ್ಯತೀತ ಸಿದ್ಧಾಂತವನ್ನು ಮರೆತಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಗೌಪ್ಯ ಸಂಧಾನ ಮಾಡಿಕೊಂಡಿದ್ದರು. ಎರಡೂ ಪಕ್ಷಗಳು ಸೇರಿಕೊಂಡು ಕಾಂಗ್ರೆಸ್ ಪಕ್ಷದ ವಿರುದ್ಧ ಸೆಣಸಿದ್ದವು. ಬೀದರ್ ಜಿಲ್ಲೆಯ ಹುಮನಾಬಾದ್ ಕ್ಷೇತ್ರದಲ್ಲಿ ಜಂಟಿ ಮುಸ್ಲಿಂ ಅಭ್ಯರ್ಥಿಯನ್ನು ಹಾಕಿದ್ದರು. ಕಾಂಗ್ರೆಸ್ ಕುಟುಂಬ ರಾಜಕಾರಣ ನಡೆಸುತ್ತದೆ ಎಂದು ಟೀಕಿಸುತ್ತಿದ್ದ ಬಿಜೆಪಿ, ಈಗ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಮತ್ತು ಅವರ ಪುತ್ರ ಹೆಚ್ ಡಿ ಕುಮಾರಸ್ವಾಮಿ ಅವರ ಕುಟುಂಬ ಪಕ್ಷದೊಂದಿಗೇ ಕೈಜೋಡಿಸಿದೆ ಎಂದು ಟೀಕಾಪ್ರಹಾರ ನಡೆಸಿದರು.
ಶರದ್ ಪವಾರ್ ಅವರ ನೇತೃತ್ವದ ಎನ್ಸಿಪಿಯನ್ನು ಭ್ರಷ್ಟ ಪಕ್ಷ ಎಂದು ಟೀಕಿಸಿದ ಬಳಿಕ ಬಿಜೆಪಿ ಮಹಾರಾಷ್ಟ್ರದಲ್ಲಿ ಬಂಡಾಯ ಶಾಸಕ ಅಜಿತ್ ಪವಾರ್ ಜೊತೆಗೂಡಿದರು. ಅದು ರಾಷ್ಟ್ರೀಯವಾಗಿ ಮುಳುಗುತ್ತಿರುವ ಪಕ್ಷವಾಗಿದೆ. ಇಂಥ ಸ್ಥಿತಿಯಲ್ಲಿ ಜೆಡಿಎಸ್‌ಗೆ ಸಹಾಯ ಮಾಡಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಅವರು ಕರ್ನಾಟಕದಲ್ಲಿ ವ್ಯಾಪಕ ಪ್ರಚಾರ ನಡೆಸಿದರು. ಆದರೆ ಬಿಜೆಪಿಯನ್ನು ಸೋಲಿನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ. 2024ರಲ್ಲೂ ಅದೇ ಮರುಕಳಿಸಲಿದೆ ಎಂದು ಹೇಳಿದರು.