ಭೋಪಾಲ್: 15 ವರ್ಷಗಳ ನಂತರ 2018ರಲ್ಲಿ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ಮಾಲ್ವಾ - ನಿಮಾರ್ ಪ್ರದೇಶವು ಪ್ರಮುಖ ಪಾತ್ರ ವಹಿಸಿತ್ತು. ಈಗ ಮತ್ತೆ ವಿಧಾನಸಭೆ ಚುನಾವಣೆಗಳು ಒಂದು ವರ್ಷ ಬಾಕಿ ಇರುವಂತೆ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯ ಮೂಲಕ ಈ ಪ್ರದೇಶದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.
ಮಾಲ್ವಾ-ನಿಮಾರ್ ಮೇಲೆ ಯಾತ್ರೆಯು ಗಮನ ಕೇಂದ್ರೀಕರಿಸಿದ್ದು ಪಕ್ಷವು ತಳಮಟ್ಟದಲ್ಲಿ ತನ್ನ ಸಂಘಟನೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಲಿದೆ. ಅಲ್ಲದೆ ಪಕ್ಷವು ಚುನಾವಣಾ ಲಾಭ ಪಡೆಯಲು ಸಹ ಇದರಿಂದ ಅನುಕೂಲವಾಗಲಿದೆ ಎನ್ನುತ್ತಾರೆ ಕಾಂಗ್ರೆಸ್ ನಾಯಕರು ಮತ್ತು ರಾಜಕೀಯ ವೀಕ್ಷಕರು.
ಒಟ್ಟು 230 ಅಸೆಂಬ್ಲಿ ಸ್ಥಾನಗಳಲ್ಲಿ 66 ಸ್ಥಾನಗಳನ್ನು ಹೊಂದಿರುವ ಈ ಪ್ರದೇಶದ ರಾಜಕೀಯ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಆಡಳಿತಾರೂಢ ಭಾರತೀಯ ಜನತಾ ಪಕ್ಷವೂ (ಬಿಜೆಪಿ) ಮಾಲ್ವಾ-ನಿಮಾರ್‌ನಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಮತ್ತು ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ತನ್ನ ಪ್ರಯತ್ನಗಳನ್ನು ಹೆಚ್ಚಿಸಿದೆ.
ನವೆಂಬರ್ 24 ರಂದು ಯಾತ್ರೆಯು ಬುಡಕಟ್ಟು ಜನಾಂಗದ ಆರಾಧ್ಯ ದೈವ ಮತ್ತು ಕ್ರಾಂತಿಕಾರಿ ತಾಂತ್ಯಾ ಭೀಲ್ ಅವರ ಜನ್ಮಸ್ಥಳವಾದ ಖಾಂಡ್ವಾ ಜಿಲ್ಲೆಯ ಪಂಧಾನಾ ತೆಹಸಿಲ್ ಬರೋಡಾ ಅಹಿರ್ ಗ್ರಾಮಕ್ಕೆ ಪ್ರವೇಶಿಸಿದೆ. ಇದಕ್ಕೂ ಒಂದು ದಿನ ಮುಂಚೆ ಯಾತ್ರೆಯು ಬುರ್ಹಾನ್ಪುರ ಜಿಲ್ಲೆಯ ಮೂಲಕ ಮಧ್ಯಪ್ರದೇಶ ಪ್ರವೇಶಿಸಿತ್ತು.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬರೋಡಾ ಅಹಿರ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತ, ಆದಿವಾಸಿಗಳ ಹಕ್ಕುಗಳ ಮರುಸ್ಥಾಪನೆಗಾಗಿ ಒತ್ತು ನೀಡಿದರು ಮತ್ತು ತಾಂತ್ಯ ಭೀಲ್‌ಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಆದಾಗ್ಯೂ, ಅದಕ್ಕೂ ಒಂದು ದಿನ ಮುಂಚಿತವಾಗಿ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಬುಡಕಟ್ಟು ಪ್ರಾಬಲ್ಯದ ನಿಮಾರ್ ಗ್ರಾಮಕ್ಕೆ ಆಗಮಿಸಿದ್ದರು. ಆದಿವಾಸಿಗಳನ್ನು ಓಲೈಸುವ ಬಿಜೆಪಿಯ ಪ್ರಚಾರ ಕಾರ್ಯಕ್ರಮವಾದ ಜನಜಾತಿ ಗೌರವ್ ಯಾತ್ರೆಗೆ ಅವರು ಚಾಲನೆ ನೀಡಿದರು.
ಚೌಹಾಣ್ ಅವರು ತಾಂತ್ಯಾ ಭೀಲ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು ಮತ್ತು ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು. ಭಾರತೀಯ ರಾಬಿನ್ ಹುಡ್ ಎಂದು ಕರೆಯಲ್ಪಡುವ ತಾಂತ್ಯಾ ಭೀಲ್ ಅವರು 12 ವರ್ಷಗಳ ಕಾಲ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದ ಕ್ರಾಂತಿಕಾರಿ ಎಂದು ಪ್ರಶಂಸಿಸಲ್ಪಟ್ಟಿದ್ದಾರೆ. ಇವರು ಬ್ರಿಟಿಷ್ ಸರ್ಕಾರದ ಖಜಾನೆಗಳನ್ನು ಲೂಟಿ ಮಾಡಿ, ಅದನ್ನು ಸಂಪತ್ತನ್ನು ಬಡವರಿಗೆ ಹಂಚುತ್ತಿದ್ದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ರಜನೀಶ್ ಅಗರವಾಲ್ ಮಾತನಾಡಿ, ನಮ್ಮ ಪಕ್ಷವು ಮಾಲ್ವಾ-ನಿಮಾರ್ ಪ್ರದೇಶದಲ್ಲಿ ದೀರ್ಘಕಾಲ ಮಾತ್ರವಲ್ಲದೆ ರಾಜ್ಯದ ಇತರ ಭಾಗಗಳಲ್ಲಿಯೂ ಜನರಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಕೆಲಸ ಮಾಡುತ್ತಿದೆ ಎಂದರು.
ಮಧ್ಯ ಪ್ರದೇಶದಲ್ಲಿ ಆರು ಜನಜಾತಿಯ ಗೌರವ ಯಾತ್ರೆಗಳನ್ನು ಕೈಗೊಳ್ಳಲಾಗುತ್ತಿದ್ದು, ಪಂಚಾಯತ್‌ಗಳ (ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯ್ದೆ (ಪಿಇಎಸ್‌ಎ ಕಾಯ್ದೆ) ಬಗ್ಗೆ ಜಾಗೃತಿ ಮೂಡಿಸಲು ಪ್ರತ್ಯೇಕ ಯಾತ್ರೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಕಾರ್ಯತಂತ್ರದ ಭಾಗವಾಗಿ ಬಿಜೆಪಿಯು ಈ ಕಾರ್ಯಕ್ರಮಗಳನ್ನು ಮೊದಲೇ ಯೋಜಿಸಿದೆ ಮತ್ತು ಸೆಪ್ಟೆಂಬರ್ 7 ರಂದು ತಮಿಳುನಾಡಿನಲ್ಲಿ ಪ್ರಾರಂಭವಾದ ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಗರವಾಲ್ ಹೇಳಿದರು.
2018 ರ ಅಸೆಂಬ್ಲಿ ಚುನಾವಣೆಯಲ್ಲಿ, ಮಾಲ್ವಾ-ನಿಮಾರ್ ಪ್ರದೇಶದ 66 ಸ್ಥಾನಗಳಲ್ಲಿ, ಕಾಂಗ್ರೆಸ್ 35 (ಒಟ್ಟು ಸ್ಥಾನ 114) ಸ್ಥಾನ ಗಳಿಸಿತ್ತು. ಇದು ಆ ವರ್ಷದ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ತುಂಬಾ ಸಹಾಯ ಮಾಡಿತ್ತು.
ಇದನ್ನೂ ಓದಿ: ಕಲಬುರಗಿಯಲ್ಲಿ ಕೇಸರಿ ಬ್ರಿಗೇಡ್ ಬೃಹತ್ ಒಬಿಸಿ ಸಮಾವೇಶ.. ಚುನಾವಣೆಗೆ ರಹಕಣಳೆ