ಭುವನೇಶ್ವರ, ಒಡಿಶಾ: ಆನ್‌ಲೈನ್ ಪೇಮೆಂಟ್ ಆ್ಯಪ್ಗಳ ಮೂಲಕ ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಮೂವರು ಯುವಕರನ್ನು ಒಡಿಶಾ ಪೊಲೀಸ್ನ ಅಪರಾಧ ವಿಭಾಗದ ಅಧಿಕಾರಿಗಳು ಭುವನೇಶ್ವರ ನಗರದಲ್ಲಿ ಬಂಧಿಸಿದ್ದಾರೆ.
ಭುವನೇಶ್ವರ ನಗರದ ರಸೂಲ್ಗಢ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸವಿದ್ದ ಆರೋಪಿಗಳು 'ಜಮ್ತಾರಾ ಗ್ಯಾಂಗ್' ಮಾದರಿಯಲ್ಲಿ ವಂಚನೆ ಮಾಡುತ್ತಿದ್ದರು ಎಂದು ತಿಳಿದುಬಂದಿದ್ದು, ಸುಮಾರು 20 ರಾಜ್ಯಗಳ ಜನರನ್ನು ವಂಚಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 28, 2021ರಿಂದ ಆರೋಪಿಗಳು ವಾಸವಿದ್ದ ಬಾಡಿಗೆ ಮನೆಯಿಂದಲೇ ಜನರನ್ನು ವಂಚಿಸುವ ಕೆಲಸ ಮಾಡುತ್ತಿದ್ದರು. ವಿದ್ಯಾರ್ಥಿಗಳು ಎಂದು ಹೇಳಿಕೊಂಡು ಮನೆಯನ್ನು ಬಾಡಿಗೆ ಪಡೆದಿದ್ದರು ಎಂದು ಅಪರಾಧ ವಿಭಾಗದ ಎಡಿಜಿ ಸಂಜೀಬ್ ತಿಳಿಸಿದ್ದಾರೆ.
ಆರೋಪಿಗಳನ್ನು ಪ್ರದುಮ್ ಕುಮಾರ್ ಮಂಡಲ್ (20), ಕೃಷ್ಣ ಕುಮಾರ್ ಮಂಡಲ್ (19) ಮತ್ತು ಚೆತ್ಲಾಲ್ ಮೋದ್ನಾಲ್ (28) ಎಂದು ಗುರುತಿಸಲಾಗಿದ್ದು, ಅವರಲ್ಲಿ ಇಬ್ಬರು ಜಾರ್ಖಂಡ್ನ ಗಿರಿಡಿಹ್ ಪ್ರದೇಶದವರಾಗಿದ್ದರೆ, ಮತ್ತೊಬ್ಬ ವ್ಯಕ್ತಿ ಧನಬಾದ್ ಪ್ರದೇಶಕ್ಕೆ ಸೇರಿದವನು ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಜಮ್ತಾರಾ ಗ್ಯಾಂಗ್?
ಜಮ್ತಾರಾ ಗ್ಯಾಂಗ್ ಆನ್‌ಲೈನ್ ವಂಚಕರ ಗುಂಪಾಗಿದ್ದು, ಜನರಿಗೆ ಎಸ್ಎಂಎಸ್ ಅಥವಾ ಕರೆಗಳನ್ನು ಮಾಡುವ ಮೂಲಕ ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಳ್ಳುತ್ತಾರೆ. ಬ್ಯಾಂಕ್ ಅಧಿಕಾರಿಗಳೆಂದು ನಂಬಿದ ಜನರ ಬಳಿ ಬ್ಯಾಂಕ್ ವಿವರಗಳು ಮತ್ತು ಮುಂತಾದ ದಾಖಲೆಗಳನ್ನು ಸಂಗ್ರಹಿಸಿ, ಪೇಮೆಂಟ್ ಆ್ಯಪ್ಗಳ ಮೂಲಕ ಹಣ ಲೂಟಿ ಮಾಡುತ್ತಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇವರು ನೂರಾರು ಸಿಮ್ ಕಾರ್ಡ್ಗಳನ್ನು ಬಳಸುತ್ತಾರೆ. ಜೊತೆಗೆ ಸಿಮ್ಗಳನ್ನು ಆಗಾಗ ಬದಲಾಯಿಸುತ್ತಾರೆ. ಅದರ ಜೊತೆಗೆ ಫೋನ್ಗಳನ್ನು ಕೂಡಾ ಬದಲಾಯಿಲಿದ್ದು, ಅವರ ಜಾಡನ್ನು ಕಂಡು ಹಿಡಿಯುವುದು ಪೊಲೀಸರಿಗೆ ಕಷ್ಟವಾಗುತ್ತದೆ. ಇದು ಜಮ್ತಾರಾ ಗ್ಯಾಂಗ್ ವಂಚನೆಯ ವಿಧಾನವಾಗಿದ್ದು, ಈಗ ಬಂಧಿತರೂ ಇದೇ ರೀತಿಯಲ್ಲಿ ಜನರನ್ನು ವಂಚಿಸುತ್ತಿದ್ದರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಆಹಾರ ಹುಡುಕಿ ಬಂದ 7 ನವಿಲುಗಳಿಗೆ ಇಲಿ ಪಾಷಾಣ ಹಾಕಿ ಕೊಂದ ವ್ಯಕ್ತಿ ಬಂಧನ