ಶ್ರೀನಗರ(ಜಮ್ಮು ಕಾಶ್ಮೀರ): ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸೋಮವಾರ ಶ್ರೀನಗರ ವರ್ತುಲ ರಸ್ತೆ ಯೋಜನೆ ಸೇರಿದಂತೆ 3,612 ಕೋಟಿ ರೂ. ವೆಚ್ಚದ ನಾಲ್ಕು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಬಳಿಕ ಮಾತನಾಡಿದ ನಿತಿನ್ ಗಡ್ಕರಿ, ರಸ್ತೆ ಸಂಪರ್ಕ ಯಾವುದೇ ಪ್ರದೇಶದ ಸಾಮಾಜಿಕ, ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಪ್ರಮುಖ ಚಾಲಕ ಎಂದು ಬಣ್ಣಿಸಿದ್ದಾರೆ. ಹೊಸ ಯೋಜನೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ರಸ್ತೆ ಸಂಪರ್ಕ ಬಲಪಡಿಸುವ ಮೂಲಕ, ಜನರ ಜೀವನೋಪಾಯದ ಅವಕಾಶಗಳನ್ನು ತೆರೆಯುತ್ತವೆ. ಇದು ಪ್ರವಾಸೋದ್ಯಮ ಮತ್ತು ವ್ಯಾಪಾರ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ. ಒಟ್ಟಾರೆ ಜನರ ಜೀವನ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಹೇಳಿದರು.
2023 ರ ಅಂತ್ಯಕ್ಕೆ ಪೂರ್ಣ
ಬಹುನಿರೀಕ್ಷಿತ ಶ್ರೀನಗರ ವರ್ತುಲ ರಸ್ತೆ ಯೋಜನೆಯು 2023 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ಅಲ್ಲದೇ, ಮುಂದಿನ ಎರಡು ಮೂರು ವರ್ಷಗಳಲ್ಲಿ ಶ್ರೀನಗರ - ಜಮ್ಮು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯೂ ಪೂರ್ಣಗೊಳ್ಳುತ್ತದೆ ಎಂದರು.
ಮೆಗಾ ಹೆದ್ದಾರಿ ರಸ್ತೆ ಮತ್ತು ಸುರಂಗ ಯೋಜನೆಗಳು ದೆಹಲಿ - ಕಾಶ್ಮೀರ ಪ್ರಯಾಣದ ಸಮಯ ಕಡಿಮೆ ಮಾಡುತ್ತದೆ. ಸಾರಿಗೆ ವಲಯದಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಪರಿಚಯಿಸುವುದಾಗಿ ಹೇಳಿದರು.
ಹೊಸ ಯೋಜನೆಗಳಿಂದ ಸಾಮಾಜಿಕ - ಆರ್ಥಿಕಾಭಿವೃದ್ಧಿ
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮಾತನಾಡಿ, ಮುಂದಿನ ಕೆಲ ವರ್ಷಗಳಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯ ವಿಚಾರದಲ್ಲಿ ಮಹತ್ತರವಾದ ಬದಲಾವಣೆ ಕಾಣಲಿದೆ. ಹೊಸ ಯೋಜನೆಗಳು ಸಾಮಾಜಿಕ - ಆರ್ಥಿಕಾಭಿವೃದ್ಧಿಗೆ ಮತ್ತಷ್ಟು ಚಾಲನೆ ನೀಡುತ್ತವೆ ಎಂದರು.
2014 ರವರೆಗೆ, ಲಡಾಖ್ ಸೇರಿದಂತೆ ಹಿಂದಿನ ಜಮ್ಮು ಮತ್ತು ಕಾಶ್ಮೀರದಲ್ಲಿ ಕೇವಲ 7 ರಾಷ್ಟ್ರೀಯ ಹೆದ್ದಾರಿಗಳು ಮಾತ್ರ ಇದ್ದವು. 2021 ರಲ್ಲಿ, ಜಮ್ಮುಕಾಶ್ಮೀರದಲ್ಲಿಯೇ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆ 11 ಕ್ಕೆ ಹೆಚ್ಚಾಗಿದೆ. ಸುಮಾರು 38,000 ಕೋಟಿ ರೂಪಾಯಿಗಳ ಯೋಜನೆಗಳ ಕೆಲಸ ಈಗಾಗಲೇ ನಡೆಯುತ್ತಿದೆ ಎಂದು ಹೇಳಿದರು. ಡಿಸೆಂಬರ್ 2022 ರ ವೇಳೆಗೆ ಕಾಶ್ಮೀರ - ಕನ್ಯಾಕುಮಾರಿ ರೈಲು ಮಾರ್ಗ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ನಾಲ್ಕು ಹೊಸ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಇಂತಿವೆ
NH-701A ಯ ಬಾರಾಮುಲ್ಲಾ - ಗುಲ್ಮಾರ್ಗ್ ವಿಭಾಗದಲ್ಲಿ ಈಗಿರುವ 43 ಕಿಮೀ ಉದ್ದದ ಕ್ಯಾರೇಜ್ ವೇ ಅನ್ನು ಬಲಪಡಿಸುವುದು ಮತ್ತು ಮೇಲ್ದರ್ಜೆಗೇರಿಸುವುದು.
ಡೋನಿಪಾವದಿಂದ ಆಶಾಜಿಪೋರಾ ಮೂಲಕ NH-244 & NH-44 ಅನ್ನು ಸಂಪರ್ಕಿಸುವ ಹೊಸ ದ್ವಿಪಥ ಬೈಪಾಸ್ ನಿರ್ಮಾಣ.
NH-244 ನ ಖೆಲ್ಲಾನಿ ಖಾನಬಾಲ್ ವಿಭಾಗದಲ್ಲಿ ವೈಲೂನಿಂದ ದೋನಿಪಾವದವರೆಗಿನ 28 ಕಿಮೀ ರಸ್ತೆ ನಿರ್ಮಾಣ ಮತ್ತು ಉನ್ನತೀಕರಣ.
ಶ್ರೀನಗರದ ಸುತ್ತಲೂ ರಿಂಗ್ ರೋಡ್ ನಿರ್ಮಾಣ ಮಾಡುವುದು.