ಜಮ್ಮು : ಇಲ್ಲಿನ ಭಾರತೀಯ ವಾಯುಪಡೆ (ಐಎಎಫ್) ನಿಲ್ದಾಣದ ಮೇಲೆ ನಡೆದ ಡ್ರೋನ್ ಬಾಂಬ್ ದಾಳಿಯಲ್ಲಿ ಎರಡು ಐಇಡಿಗಳಲ್ಲಿ ಆರ್‌ಡಿಎಕ್ಸ್ ಮತ್ತು ನೈಟ್ರೇಟ್ ಸೇರಿದಂತೆ ಸ್ಫೋಟಕ ವಸ್ತುಗಳ ಕಾಕ್ಟೇಲ್ ಬಳಸಲಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ದ ತಜ್ಞರು ಹೇಳಿದ್ದಾರೆ.
ಭಾರತದಲ್ಲಿ ಆರ್‌ಡಿಎಕ್ಸ್ ಸಿಗುವುದಿಲ್ಲ, ಅದು ಪಾಕಿಸ್ತಾನದಿಂದ ಬಂದಿರಬಹುದು. ಹಾಗಾಗಿ, ಸ್ಪೋಟದಲ್ಲಿ ಪಾಕಿಸ್ತಾನದ ಕೈವಾಡ ಇರುವುದಕ್ಕೆ ಇದು ಸಾಕ್ಷಿಯಾಗಿದೆ. ಸ್ಪೋಟದ ಹಿಂದೆ ಮೂಲಸೌಕರ್ಯ ಹಾನಿ ಮಾಡುವ ಉದ್ದೇಶ ಇತ್ತು. ಜೊತೆಗೆ ಹೆಚ್ಚು ಸ್ಪ್ಲಿಂಟರ್‌ಗಳು ಮತ್ತು ಬಾಲ್-ಬೇರಿಂಗ್‌ಗಳನ್ನು ಹೊಂದಿರುವ ಸಿಬ್ಬಂದಿಯನ್ನು ಗುರಿಯಾಗಿಸಲಾಗಿತ್ತು. ಚೀನಾ ನಿರ್ಮಿತ ಡ್ರೋನ್ ಅನ್ನು ದಾಳಿಯಲ್ಲಿ ಬಳಸಲಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಏರ್ಬೇಸ್ ಮೇಲಿನ ದಾಳಿಯ ಹಿಂದೆ ನಿಷೇಧಿತ ಲಷ್ಕರ್-ಎ- ತೈಬಾ ಸಂಘಟನೆ ಇರುವ ಶಂಕೆಯಿಂದೆ ಎಂದು ಕಳೆದ ವಾರ ಜಮ್ಮು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದರು.
ಓದಿ : Fake App: ಚೀನಾದಿಂದ ಭಾರತೀಯರಿಗೆ ₹ 360 ಕೋಟಿ ದೋಖಾ.. ವಂಚನೆ ಜಾಲದಲ್ಲಿ ಬೆಂಗಳೂರು ದಂಪತಿ!
ಮೊಟ್ಟ ಮೊದಲ ಬಾರಿಗೆ ಡ್ರೋನ್ ಮೂಲಕ ಪಾಕಿಸ್ತಾನ ಮೂಲದ ಉಗ್ರರು ಏರ್ಬೇಸ್ ಮೇಲೆ ಎರಡು ಬಾಂಬ್ ದಾಳಿ ಮಾಡಿದ್ದರು. ಘಟನೆಯಲ್ಲಿ ಇಬ್ಬರು ಸೇನಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿತ್ತು.
ಮೊದಲು ಸ್ಥಳೀಯ ಪೊಲೀಸರು ತನಿಖೆ ನಡೆಸಿದ ಬಳಿಕ, ಕೇಂದ್ರ ಗೃಹ ಸಚಿವಾಲಯ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಸ್ತಾಂತರಿಸಿದೆ. ಜಮ್ಮು ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ಗಡಿಯವರೆಗಿನ ವೈಮಾನಿಕ ದೂರ 14 ಕಿ.ಮೀ. ಡ್ರೋನ್ ದಾಳಿಯ ಬೆದರಿಕೆಯ ಇರುವ ಹಿನ್ನೆಲೆ, ಜಮ್ಮುವಿನ ಭದ್ರತಾ ಸಂಸ್ಥೆಗಳು ಈಗಾಗಲೇ ವಾಯುಪಡೆಯ ನಿಲ್ದಾಣದಲ್ಲಿ ಡ್ರೋನ್ ತಡೆಯುವ ವ್ಯವಸ್ಥೆಯನ್ನು ಸ್ಥಾಪಿಸಿವೆ.