ಉಧಮ್‌ಪುರ (ಜಮ್ಮು ಮತ್ತು ಕಾಶ್ಮೀರ) : ತಿರುಮಲ ಕ್ಷೇತ್ರಕ್ಕೆ ಯಾತ್ರೆ ಹೊರಟಿದ್ದ ವೇಳೆ ಚಿರತೆ ದಾಳಿ ಮಾಡಿ ಬಾಲಕಿಯನ್ನು ಹೊತ್ತೊಯ್ದ ಘಟನೆ ನಡೆದಿತ್ತು. ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕು ವರ್ಷದ ಬಾಲಕಿಯನ್ನು ಚಿರತೆ ಹೊತ್ತೊಯ್ದು ಕೊಂದು ಹಾಕಿದೆ. ಇದು ಕಾಡಂಚಿನ ಗ್ರಾಮಸ್ಥರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಕಾಡುಪ್ರಾಣಿ ಸೆರೆಗಾಗಿ ಅರಣ್ಯಾಧಿಕಾರಿಗಳು ಬೋನು ಅಳವಡಿಸಿದ್ದಾರೆ.
ಉಧಂಪುರ ಜಿಲ್ಲೆಯ ಅಪ್ಪರ್ ಬಂಜಾಲಾ ಗ್ರಾಮದ ನಾಲ್ಕು ವರ್ಷದ ತನು ಚಿರತೆಗೆ ಆಹಾರವಾದ ಬಾಲಕಿ. ಶನಿವಾರ ರಾತ್ರಿ 8.30 ರ ಸುಮಾರಿನಲ್ಲಿ ಮನೆಯಿಂದ ಹೊರಗೆ ಬಂದಾಗ ಚಿರತೆ ಆಕೆಯ ಮೇಲೆ ದಾಳಿ ಮಾಡಿ ಎಳೆದೊಯ್ದಿದೆ. ಎಷ್ಟೊತ್ತಾದರೂ ಮಗು ಕಾಣಿಸದಿದ್ದಾಗ ಕುಟುಂಬಸ್ಥರು ಆತಂಕಗೊಂಡಿದ್ದರು. ಕಾಡುಪ್ರಾಣಿ ದಾಳಿ ನಡೆಸಿರುವ ಬಗ್ಗೆ ಸುಳಿವು ಸಿಕ್ಕಿರುವ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಅಧಿಕಾರಿಗಳು ಮತ್ತು ಜನರು ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಡಿದ್ದಾರೆ. ಬಳಿಕ ಭಾನುವಾರ ಮುಂಜಾನೆ ಬಾಲಕಿಯ ಅರೆಬರೆ ದೇಹ ಅರಣ್ಯದೊಳಗೆ ಬಿದ್ದಿದ್ದನ್ನು ರಕ್ಷಣಾ ತಂಡಗಳು ಪತ್ತೆ ಹಚ್ಚಿವೆ. ಇದು ಚಿರತೆಯ ದಾಳಿ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಚಿರತೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಇಲಾಖೆಯು ಅದನ್ನು ಸೆರೆ ಹಿಡಿಯಲು ಅರಣ್ಯದ ವಿವಿಧೆಡೆ ಬೋನುಗಳನ್ನು ಇಡಲಾಗಿದೆ. ಈ ಘಟನೆಯ ನಂತರ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ. ಎಚ್ಚರದಿಂದಿರಲು ಸೂಚಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಿರುಮಲದಲ್ಲಿ ಚಿರತೆ ದಾಳಿ: ಕೆಲ ದಿನಗಳ ಹಿಂದಷ್ಟೇ ತಿರುಮಲದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಆರು ವರ್ಷದ ಬಾಲಕಿಯನ್ನು ಚಿರತೆ ಎಳೆದೊಯ್ದು ಬಲಿ ಪಡೆದಿತ್ತು. ತಿರುಪತಿಗೆ ಹೋಗುವ ಅಲಿಪಿರಿ- ತಿರುಮಲ ಮೆಟ್ಟಿಲುದಾರಿಯಲ್ಲಿ ಕುಟುಂಬಸ್ಥರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆರು ವರ್ಷದ ಮಗುವಿನ ಚಿರತೆ ದಾಳಿ ಮಾಡಿತ್ತು. ಬಾಲಕಿಯ ಅರ್ಧ ದೇಹವನ್ನು ತಿಂದು ಹಾಕಿತ್ತು.
ತಕ್ಷಣವೇ ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ, ನರಸಿಂಹಸ್ವಾಮಿ ದೇವಸ್ಥಾನದ ಅಕ್ಕಪಕ್ಕದ ಪ್ರದೇಶದಲ್ಲಿ ಬೋನು ಇಟ್ಟಿತ್ತು. 4 ದಿನಗಳ ಬಳಿಕ ಕಾಡುಪ್ರಾಣಿ ಬೋನಿನಲ್ಲಿ ಸೆರೆಯಾಗಿತ್ತು. ಅದನ್ನು ಹಿಡಿದು ವೆಂಕಟೇಶ್ವರ ಮೃಗಾಲಯಕ್ಕೆ (ತಿರುಪತಿ ಮೃಗಾಲಯ) ಸ್ಥಳಾಂತರಿಸಲಾಗಿತ್ತು. ಚಿರತೆ ಬೋನಿಗೆ ಸಿಕ್ಕಿ ಹಾಕಿಕೊಳ್ಳುವ ವೇಳೆ ಗಾಯಗೊಂಡಿತ್ತು. ಎಸ್‌ವಿ ಮೃಗಾಲಯಕ್ಕೆ ಸ್ಥಳಾಂತರಿಸಿದ ಬಳಿಕ ಚಿಕಿತ್ಸೆ ನೀಡಲಾಗಿತ್ತು. ಸೆರೆ ಸಿಕ್ಕ ಚಿರತೆಯು ನರಭಕ್ಷಕವೋ, ಅಲ್ಲವೋ ಎಂಬ ಬಗ್ಗೆ ಸಹ ಪರೀಕ್ಷೆ ನಡೆಸಲಾಗುವುದು ಎಂದು ದೇವಸ್ಥಾನದ ಅಧಿಕಾರಿಗಳು ಹೇಳಿದ್ದರು.
ಇದನ್ನೂ ಓದಿ: ವಿಜಯನಗರ: ಬೈಕ್ ಸವಾರನ ಮೇಲೆ ಚಿರತೆ ದಾಳಿ, ಯುವಕನಿಗೆ ಗಾಯ