ನವದೆಹಲಿ: ದೇಶದಲ್ಲಿ ಇಸ್ಲಾಂ ಧರ್ಮದ ಮೇಲೆ ಅಪಪ್ರಚಾರ ಹೆಚ್ಚಿದೆ. ಇಸ್ಲಾಮೋಫೋಬಿಯಾ ಬಿತ್ತುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ದೇಶ ಬೇರೆಯವರಿಗೆ ಎಷ್ಟು ಸೇರಿದೆವೋ ಅಷ್ಟೇ ನಮ್ಮದು ಎಂದು ಮುಸ್ಲಿಂ ಸಂಘಟನೆಯಾದ ಜಮೈತ್ ಉಲೇಮಾ ಎ ಹಿಂದ್ ಮುಖ್ಯಸ್ಥ ಮಹಮೂದ್ ಮದನಿ ಹೇಳಿದರು.
ನವದೆಹಲಿಯ ರಾಮ್ಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮದನಿ, ಭಾರತ ಮುಸ್ಲಿಮರ ನಾಡಾಗಿದೆ. ನಮ್ಮನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಇಸ್ಲಾಂ ಧರ್ಮದ ವಿರುದ್ಧ ಸಲ್ಲದ ಪ್ರಚಾರ ನಡೆಸಿ ದ್ವೇಷ ಭಾಷಣ ಮೂಡಿಸಲಾಗುತ್ತಿದೆ. ಇಸ್ಲಾಮೋಫೋಬಿಯಾ ಹೆಚ್ಚುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನೆ ನೀಡುವವರನ್ನು ಶಿಕ್ಷಿಸಲು ಪ್ರತ್ಯೇಕ ಕಾನೂನು ಜಾರಿಗೆ ತರಬೇಕು. ಇಸ್ಲಾಮೋಫೋಬಿಯಾ ಹೆಚ್ಚಳ, ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಮತ್ತು ಪ್ರಚೋದನೆಯ ಪ್ರಕರಣಗಳು ನಮ್ಮ ದೇಶದಲ್ಲಿ ಆತಂಕಕಾರಿ ಮಟ್ಟಕ್ಕೆ ಏರಿವೆ. ಇವೆಲ್ಲಕ್ಕೂ ಕಡಿವಾಣ ಹಾಕಬೇಕು" ಎಂದು ಜಮೈತ್ ಒತ್ತಾಯಿಸಿದೆ.
ನಿರ್ಣಯ ಅಂಗೀಕಾರ: ದೇಶದಲ್ಲಿ ಇಸ್ಲಾಂ ವಿರುದ್ಧ ದ್ವೇಷದ ಪ್ರಚಾರ ಮತ್ತು ಇಸ್ಲಾಮೋಫೋಬಿಯಾ, ಮತದಾರರ ನೋಂದಣಿ ಮತ್ತು ಚುನಾವಣೆಯಲ್ಲಿ ಹೆಚ್ಚಿನ ಭಾಗವಹಿಸುವಿಕೆಯ ಖಚಿತತೆ ವಿರುದ್ಧ ಸೇರಿದಂತೆ ಹಲವಾರು ನಿರ್ಣಯಗಳನ್ನು ಸಂಘಟನೆಯು ಅಂಗೀಕರಿಸಿತು. ಕಾರ್ಯಕ್ರಮದ ಸಮಗ್ರ ಅಧಿವೇಶನ ನಾಳೆ(ಭಾನುವಾರ) ನಡೆಯಲಿದೆ.
ದೇಶದಲ್ಲಿ ಈ ರೀತಿಯ ಬೆಳವಣಿಗೆ ನಡೆಯುತ್ತಿದ್ದರೂ, ಸರ್ಕಾರ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ವಿಳಂಬ ಧೋರಣೆ ಅನುಸರಿಸುತ್ತಿದೆ. ಸಮಗ್ರತೆಯನ್ನು ಖಾತ್ರಿಪಡಿಸುವುದು ಮತ್ತು ದೇಶ ಸಕಾರಾತ್ಮಕ ಬೆಳವಣಿಗೆ ಹೇಗೆ ಹೊಂದುವುದು ಎಂಬುದರ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಜಮೈತ್ ಸಂಘಟನೆ ಸಲಹೆ ನೀಡಿತು.
ಜಮೈತ್ ಉಲೇಮಾ ಎ ಹಿಂದ್ ಭಾರತದ ಮುಸ್ಲಿಂ ಸಂಘಟನೆಯಾಗಿದೆ. ಇಲ್ಲಿನ ಮುಸ್ಲಿಮರಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣವನ್ನು ಉತ್ತೇಜಿಸುವ ಮತ್ತು ಅವರ ಹಕ್ಕುಗಳು, ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಇದನ್ನು 1919 ರಲ್ಲಿ ಸ್ಥಾಪಿಸಲಾಯಿತು.
ಈ ಸಂಘಟನೆಯು ಭಾರತದಲ್ಲಿನ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಿ ಮುಸ್ಲಿಂ ಸಂಘಟನೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ದೇಶದಲ್ಲಿ ಹಲವಾರು ಸಾಮಾಜಿಕ ಮತ್ತು ರಾಜಕೀಯ ಚಳವಳಿಗಳಲ್ಲಿ ಇದು ಮುಂಚೂಣಿಯಲ್ಲಿದೆ.
ಭಾರತೀಯ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲ್ಲ: ಈ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮದನಿ, ಭಾರತೀಯ ಮುಸ್ಲಿಮರು ಯಾವುದೇ ಕಾರಣಕ್ಕೂ ದೇಶ ಬಿಟ್ಟು ಹೋಗುವುದಿಲ್ಲ. ನಮ್ಮನ್ನು ಇಲ್ಲಿಂದ ಹೋಗಿ ಎಂದು ಹೇಳುವವರೇ ಅಲ್ಲಿಗೆ ಹೋಗಲಿ ಎಂದು ಗುಡುಗಿದ್ದರು. ಎಲ್ಲಾ ಮುಸ್ಲಿಮರು ಭಯ, ಹತಾಶೆ ಮತ್ತು ಭಾವೋದ್ವೇಗದಿಂದ ದೂರವಿದ್ದು, ತಮ್ಮ ಭವಿಷ್ಯದ ಒಳಿತಿಗಾಗಿ ಶ್ರಮಿಸಬೇಕು. ಮುಸ್ಲಿಮರು ಯಾವಾಗಲೂ ತ್ಯಾಗ ಮಾಡಲು ಸಿದ್ಧರಿದ್ದಾರೆ. ಈ ವಿಷಯದಲ್ಲಿ ಅವರು ಯಾರಿಗೂ ಕಡಿಮೆಯಿಲ್ಲ ಎಂದು ಹೇಳಿಕೆ ನೀಡಿದ್ದರು.
ಈ ದೇಶದ ರಕ್ಷಣೆಗಾಗಿ ನಮ್ಮ ಪ್ರಾಣ ಹೋದರೂ ಅದು ನಮಗೆ ಸಂತೋಷದ ಸಂಗತಿಯಾಗಿದೆ. ದೇಶಕ್ಕಾಗಿ ನಮ್ಮ ಜವಾಬ್ದಾರಿಯನ್ನು ನಾವು ನಿರ್ವಹಿಸುತ್ತೇವೆ. ನಮ್ಮ ಅಸ್ಮಿತೆ ಮತ್ತು ತಾಯ್ನಾಡಿನ ಮೇಲಿನ ಪ್ರೀತಿಯನ್ನು ಸಹಿಸದಿದ್ದರೆ ಅವರು ಬೇರೆಡೆ ಹೋಗಬಹುದು. ಈ ತಾಯ್ನಾಡು ನಮ್ಮದು ಎಂದು ಹೇಳುತ್ತೇನೆ. ನಮ್ಮ ಪೂರ್ವಜರು ಬಹುಪಾಲು ಇಲ್ಲೇ ವಾಸಿಸುತ್ತಿದ್ದರು ಎಂದು ಹೇಳಿದ್ದರು.
ನಾವು ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಕಳುಹಿಸಲು ನಿಮಗೆ ಆಸಕ್ತಿ ಇದ್ದರೆ ನೀವೇ ಹೋಗಿ. ಮುಸ್ಲಿಮರ ಸಾಂವಿಧಾನಿಕ ಹಕ್ಕುಗಳ ಬಗ್ಗೆ, ವಿಶೇಷವಾಗಿ ಮುಸ್ಲಿಂ ವೈಯಕ್ತಿಕ ಕಾನೂನನ್ನು ಕೊನೆಗೊಳಿಸಲು ಯುಸಿಸಿಯ ಪ್ರಯತ್ನಗಳ ಬಗ್ಗೆ ಟೀಕಿಸಿದ್ದರು.
ಓದಿ: ಭಿಕ್ಷಾಟನೆ ನಿಲ್ಲಿಸಿ ಡೆಲಿವರಿ ಬಾಯ್ ಆಗಿ ಬದುಕು ಕಟ್ಟಿಕೊಂಡ ವಿಶೇಷ ಚೇತನ ಯುವಕ