ಮೀರತ್ (ಉತ್ತರ ಪ್ರದೇಶ): ಸಹ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿರುವ ಜಮಿಯತ್ ಉಲಮಾ-ಇ-ಹಿಂದ್ ಮುಖ್ಯಸ್ಥ ಮೌಲಾನಾ ಸೈಯದ್ ಅರ್ಷದ್ ಮದನಿ ಅವರು, ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳಿಗೆ 8 ನೇ ತರಗತಿಯ ನಂತರ ಪ್ರತ್ಯೇಕ ಶಾಲೆಗಳನ್ನು ತೆರೆಯುವಂತೆ ಮನವಿ ಮಾಡಿದ್ದಾರೆ.
ಮಂಗಳವಾರ ಉತ್ತರ ಪ್ರದೇಶದ ದೇವಬಂದ್‌ನಲ್ಲಿ ನಡೆದ ಪದಾಧಿಕಾರಿಗಳ ಸಮಾವೇಶದಲ್ಲಿ ಮದನಿ ಈ ಹೇಳಿಕೆ ನೀಡಿದ್ದಾರೆ ಎಂದು ಜಮಿಯತ್‌ನ ರಾಜ್ಯ ಉಪಾಧ್ಯಕ್ಷ ಮೌಲಾನಾ ನಜರ್ ಖಚಿತಪಡಿಸಿದ್ದಾರೆ.
"ನಮ್ಮ ಹೆಣ್ಣುಮಕ್ಕಳ ಸುರಕ್ಷತೆಗಾಗಿ ನಾವು ಚಿಂತಿತರಾಗಿದ್ದೇವೆ. ಏಕೆಂದರೆ, ಈ ಹಿಂದೆ ಕೆಲವು ಸಂಘಟನೆಗಳು ಮುಸ್ಲಿಂ ಹುಡುಗಿಯರನ್ನು ಮದುವೆಯಾಗಲು ಮನವೊಲಿಸಿದರೆ ಆರು ತಿಂಗಳವರೆಗೆ ವಿತ್ತೀಯ ಬೆಂಬಲ ಮತ್ತು ಉಚಿತ ವಸತಿ ನೀಡುವುದಾಗಿ ಘೋಷಿಸಿದ್ದವು. ಇಂತಹ ಪ್ರವೃತ್ತಿಯು ಸಹೋದರತ್ವಕ್ಕೆ ಅಪಾಯಕಾರಿ, ಸಮಾಜದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ" ಅಂತಾ ಮಾಹಿತಿ ನೀಡಿದ್ದಾರೆ.
ಪಶ್ಚಿಮ ಯುಪಿಯ 17 ಜಿಲ್ಲೆಗಳಿಂದ ಕನಿಷ್ಠ 1,500 ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ವೇಳೆ ಕೋಮುವಾದ ನಿರ್ಮೂಲನೆ, ಪರಿಸರ ಸಂರಕ್ಷಣೆ, ಮತದಾರರ ಜಾಗೃತಿ ಅಭಿಯಾನಗಳನ್ನು ಆಯೋಜಿಸುವುದು ಮತ್ತು ಮತದಾರರ ಪಟ್ಟಿಗಳಲ್ಲಿ ಹೊಸ ಹೆಸರುಗಳನ್ನು ಸೇರಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.
ಇದನ್ನೂ ಓದಿ : ಬಾಂಬ್ ಸ್ಫೋಟ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ಜಮೈತ್ ಉಲೇಮಾ ಇ ಹಿಂದ್ ನಿರ್ಧಾರ
ಅಲ್ಲಾ ಮತ್ತು ಓಂ ಒಂದೇ ಎಂದು ಹೇಳಿಕೆ ನೀಡಿದ್ದ ಮದನಿ : ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ದೆಹಲಿಯ ಜಮಿಯತ್ ಉಲಮಾ-ಐ-ಹಿಂದ್‌ನ 34ನೇ ಅಧಿವೇಶನದಲ್ಲಿ ಮಾತನಾಡಿದ್ದ ಮೌಲಾನಾ ಮದನಿ, 'ಅಲ್ಲಾ' ಮತ್ತು 'ಓಂ' ಒಂದೇ ಎಂದು ಹೇಳಿಕೆ ನೀಡಿದ್ದರು. ಈ ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಸುಮಾರು 1400 ವರ್ಷಗಳಿಂದ ಸಹೋದರರಂತೆ ವಾಸಿಸುತ್ತಿದ್ದಾರೆ. ಶ್ರೀರಾಮ, ಬ್ರಹ್ಮ ಅಥವಾ ಶಿವ ಸೇರಿದಂತೆ ಯಾರೂ ಇಲ್ಲದಿದ್ದಾಗ ಮನು ಯಾರನ್ನು ಪೂಜಿಸುತ್ತಿದ್ದರು ಎಂದು ನಾನು ಅನೇಕ ದೊಡ್ಡ ಧರ್ಮ ಗುರುಗಳ ಬಳಿ ಕೇಳಿದ್ದೇನೆ. ಆಗ ಕೆಲವರು ಶಿವನನ್ನು ಮನು ಪೂಜಿಸುತ್ತಿದ್ದರು ಎಂದು ಹೇಳಿದರು. ಆದರೆ, ಹಲವು ಧರ್ಮ ಗುರುಗಳು 'ಓಂ' ಅನ್ನು ಪೂಜಿಸುತ್ತಿದ್ದರು ಎಂದು ತಿಳಿಸಿದರು. ನಂತರ ನಾನು ಓಂ ಎಂದರೆ ಏನು ಅಂತಾ ಕೇಳಿದೆ. ಇದಕ್ಕೆ ಓಂ ಎಂದರೆ ಗಾಳಿ. ಅದಕ್ಕೆ ಯಾವ ರೂಪ ಮತ್ತು ಬಣ್ಣ ಇಲ್ಲ. ಜಗತ್ತಿನ ಎಲ್ಲೆಡೆ ಕೂಡ ಇರುತ್ತದೆ ಎಂದು ಆ ಧರ್ಮ ಗುರುಗಳು ನನಗೆ ತಿಳಿಸಿದ್ದರು. ಇದೇ ಗಾಳಿಯನ್ನೇ ನಾವು ಕೂಡ 'ಅಲ್ಲಾ' ಎಂದು ಉಲ್ಲೇಖಿಸುತ್ತೇವೆ. ಇದಕ್ಕೆ ನೀವು (ಹಿಂದೂಗಳು) ಈಶ್ವರ ಎಂದು ಕರೆಯುತ್ತೀರಿ. ನಾವು ಸಹ ಇದನ್ನೇ ಅಲ್ಲಾ ಎಂದು ಕರೆಯುತ್ತೇವೆ ಎಂದಿದ್ದರು.
ಇದನ್ನೂ ಓದಿ : ಅಲ್ಲಾ ಮತ್ತು ಓಂ ಒಂದೇ ಎಂದ ಮದನಿ : ಧಾರ್ಮಿಕ ಮುಖಂಡರ ಅಸಮಾಧಾನ