ಜಕಾರ್ತಾ (ಇಂಡೋನೇಷ್ಯಾ) : ಜಕಾರ್ತಾದಲ್ಲಿ ನಡೆಯುವ 20 ನೇ ಆಸಿಯಾನ್ - ಭಾರತ ಶೃಂಗಸಭೆ ಮತ್ತು 18 ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯಿಂದ ಇಂಡೋನೇಷ್ಯಾಕ್ಕೆ ತೆರಳಿದ್ದಾರೆ. ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೊಡೊ ಅವರ ಆಹ್ವಾನದ ಮೇರೆಗೆ ಪ್ರಧಾನಿ ಅಲ್ಲಿಗೆ ತೆರಳಲಿದ್ದಾರೆ. ಸಭೆ ಮುಗಿದ ಬಳಿಕ ನಾಳೆಯೇ ಅವರು ಭಾರತಕ್ಕೆ ವಾಪಸ್ ಬರಲಿದ್ದಾರೆ.
ಸೆಪ್ಟೆಂಬರ್ 9-10 ರಂದು ನವದೆಹಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಗೆ ಮುಂಚಿತವಾಗಿ ಇಂಡೋನೇಷ್ಯಾದಲ್ಲಿ ಆಸಿಯಾನ್- ಭಾರತ ಶೃಂಗಸಭೆ ಮತ್ತು 18 ನೇ ಪೂರ್ವ ಏಷ್ಯಾ ಶೃಂಗಸಭೆಗಳೆರಡೂ ಸೆಪ್ಟೆಂಬರ್ 7 ರಂದು ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಹಲವು ರಾಷ್ಟ್ರಗಳ ನಾಯಕರು ಅಂದೇ ವಾಪಸ್ ಬರಲು ಅನುಕೂಲವಾಗುವಂತೆ ಆಸಿಯಾನ್‌ನ ಪ್ರಸ್ತುತ ಅಧ್ಯಕ್ಷತೆ ವಹಿಸಿರುವ ಇಂಡೋನೇಷ್ಯಾ ಎರಡೂ ಶೃಂಗಸಭೆಗಳ ವೇಳಾಪಟ್ಟಿ ಹೊಂದಿಸಿದೆ.
ಸಹಕಾರ ಸಂಬಂಧಗಳ ವೃದ್ಧಿ: ಈ ಶೃಂಗಸಭೆಯು ಭಾರತ-ಆಸಿಯಾನ್ ಸಂಬಂಧಗಳ ಪ್ರಗತಿಯನ್ನು ಪರಿಶೀಲಿಸುತ್ತದೆ. ರಾಷ್ಟ್ರಗಳ ನಡುವಿನ ಭವಿಷ್ಯದ ಸಹಕಾರ ಸಂಬಂಧವನ್ನು ವೃದ್ಧಿಪಡಿಸಲಿದೆ ಎಂದು ಭಾರತ ವಿದೇಶಾಂಗ ಸಚಿವಾಲಯ ಹೇಳಿದೆ. ಇಂಡೋನೇಷ್ಯಾದಲ್ಲಿ ನಡೆಯಲಿರುವ ಆಸಿಯಾನ್ ಶೃಂಗಸಭೆಯು ಆಸಿಯಾನ್ ಮ್ಯಾಟರ್ಸ್: ಎಪಿಸೆಂಟ್ರಮ್ ಆಫ್ ಗ್ರೋತ್ ಎಂಬ ವಿಷಯದ ಮೇಲೆ ನಡೆಯಲಿದೆ.
ವರದಿಯ ಪ್ರಕಾರ, ಪೂರ್ವ ಏಷ್ಯಾ ಶೃಂಗಸಭೆಯು ಆಸಿಯಾನ್ ದೇಶಗಳ ನಾಯಕರು ಮತ್ತು ಭಾರತ ಸೇರಿದಂತೆ ಅದರ 8 ಪಾಲುದಾರರ ರಾಷ್ಟ್ರಗಳ ಪ್ರಾದೇಶಿಕ ಮತ್ತು ಜಾಗತಿಕ ಮಹತ್ವದ ವಿಷಯಗಳ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲು ವೇದಿಕೆ ಒದಗಿಸಲಿದೆ.
ಆಸಿಯಾನ್-ಭಾರತದ ಹಣಕಾಸು ಸಚಿವರು ಇಂಡೋನೇಷ್ಯಾದಲ್ಲಿ ಆಗಸ್ಟ್‌ನಲ್ಲಿ ಸಭೆ ನಡೆಸಿದರು. ಈ ವರ್ಷ ನಡೆಯುವ ಸಭೆಯ ಕಾರ್ಯಸೂಚಿಯಲ್ಲಿ ಮುಖ್ಯವಾಗಿ 2009 ರಲ್ಲಿ ಸಹಿ ಹಾಕಲಾದ ಆಸಿಯಾನ್ - ಭಾರತದ ಸರಕುಗಳ ಒಪ್ಪಂದದ (ಎಐಟಿಐಜಿಎ) ಮೇಲೆ ಗಮನ ಹರಿಸಲಾಗುತ್ತದೆ.
ಜಿ-20 ಟ್ರೋಕಾ: ಮಹತ್ವದ ಬೆಳವಣಿಗೆಯಲ್ಲಿ ಭಾರತ 2022 ರ ಡಿಸೆಂಬರ್ 1 ರಂದು ಜಿ -20 ನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಭಾರತವು ಇಂಡೋನೇಷ್ಯಾ, ಬ್ರೆಜಿಲ್ ಅನ್ನು ಒಳಗೊಂಡಿರುವ ಜಿ20 ಟ್ರೋಕಾದ ಭಾಗವಾಗಿದೆ. ಇದೇ ಮೊದಲ ಬಾರಿಗೆ ಮೂರು ಅಭಿವೃದ್ಧಿಶೀಲ ಮತ್ತು ಉದಯೋನ್ಮುಖ ಆರ್ಥಿಕತೆಗಳನ್ನು ಒಳಗೊಂಡ ಒಕ್ಕೂಟವಾಗಿದೆ. ಇಂಡೋನೇಷ್ಯಾ ಕೂಡ ಜಿ-20 'ಟ್ರೋಕಾ' ಭಾಗವಾಗಿದ್ದು, ಕಳೆದ ವರ್ಷ ಗುಂಪಿನ ಅಧ್ಯಕ್ಷತೆಯನ್ನು ಹೊಂದಿತ್ತು. (ಎಎನ್ಐ)
ಇದನ್ನೂ ಓದಿ: Cauvery issue: ಕಾವೇರಿ ನದಿ ನೀರು ಹಂಚಿಕೆ.. ಸೆಪ್ಟೆಂಬರ್ 21ಕ್ಕೆ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್