ನವದೆಹಲಿ: ಕಾಂಗ್ರೆಸ್ ನಾಯಕತ್ವದ ಮೇಲೆ ಗಂಭೀರ ಆರೋಪಗಳನ್ನು ಮಾಡಿ, ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ್ ವಿರುದ್ಧ ಕಾಂಗ್ರೆಸ್ನ ಹಲವಾರು ನಾಯಕರು ಎದಿರೇಟು ನೀಡಿದ್ದಾರೆ.
ಆಜಾದ್ ಅವರ ಡಿಎನ್ಎ ಮೋದಿಫೈಡ್ (Modi-fied) ಆಗಿದೆ ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. ತಮ್ಮನ್ನು ಅತ್ಯಂತ ಗೌರವದಿಂದ ನಡೆಸಿಕೊಂಡ ಕಾಂಗ್ರೆಸ್ ನಾಯಕತ್ವದ ವಿಶ್ವಾಸಕ್ಕೆ ಅವರು ದ್ರೋಹ ಬಗೆದಿದ್ದಾರೆ. ಈ ಮೂಲಕ ಅವರ ನಿಜವಾದ ವ್ಯಕ್ತಿತ್ವ ಬಯಲಾಗಿದೆ. ಜಿಎನ್ಎ ಅವರ ಡಿಎನ್ಎ ಮೋದಿಫೈಡ್ (Modi-fied) ಆಗಿದೆ ಎಂದು ಹೇಳುವ ಮೂಲಕ ಜೈರಾಮ್ ರಮೇಶ್, ಆಜಾದ್ ರಾಜೀನಾಮೆಯ ವಿಷಯದಲ್ಲಿ ಪ್ರಧಾನಿ ಮೋದಿ ಹೆಸರನ್ನು ಪರೋಕ್ಷವಾಗಿ ಎಳೆದು ತಂದಿದ್ದಾರೆ.
ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮಾತನಾಡಿ, ರಾಜ್ಯಸಭಾ ಸದಸ್ಯತ್ವ ಮುಗಿಯುತ್ತಿದ್ದಂತೆಯೇ ಅವರು ಅಸಮಾಧಾನಿತರಾಗಿದ್ದಾರೆ. ಹುದ್ದೆಯಿಲ್ಲದೆ ಒಂದು ಕ್ಷಣವೂ ಅವರು ಇರಲಾರರು ಎಂದು ಆಜಾದ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ರಾಜೀನಾಮೆಯನ್ನು ದುರದೃಷ್ಟಕರ ಎಂದು ಹೇಳಿರುವ ಕಾಂಗ್ರೆಸ್ ಪಕ್ಷ, ಅವರು ರಾಜೀನಾಮೆ ನೀಡಿದ ಸಮಯ ನೋವಿನ ಸಂದರ್ಭ ಎಂದು ಹೇಳಿದೆ. ಪಕ್ಷವು ವಿವಿಧ ವಿಷಯಗಳಲ್ಲಿ ಬಿಜೆಪಿಯನ್ನು ಎದುರಿಸಲು ತೊಡಗಿರುವ ಸಮಯದಲ್ಲಿ ಆಜಾದ್ ರಾಜೀನಾಮೆ ನೀಡಿದ್ದಾರೆ ಎಂದು ಅದು ತಿಳಿಸಿದೆ.
ಕಾಂಗ್ರೆಸ್ ನಾಯಕ ಮತ್ತು ಜಿ-23 ಸದಸ್ಯ ಸಂದೀಪ್ ದೀಕ್ಷಿತ್ ಗುಲಾಂ ನಬಿ ಆಜಾದ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾವು ಪಕ್ಷದೊಳಗೆ ಸುಧಾರಣೆಯನ್ನು ತರಲು ಯತ್ನಿಸುತ್ತಿದ್ದೆವೆಯೇ ಹೊರತು ಬಂಡಾಯವೇಳುವುದಲ್ಲ. ಆಜಾದ್ ಅವರ ರಾಜೀನಾಮೆ ಪಕ್ಷಕ್ಕೆ ಬಗೆದ ದ್ರೋಹ ಎಂದಿದ್ದಾರೆ. ಆಜಾದ್ ಅವರಿಗೆ ಬರೆದ ಪತ್ರದಲ್ಲಿ ದೀಕ್ಷಿತ್, ನಾನು ನಿಮ್ಮ ರಾಜೀನಾಮೆ ಪತ್ರವನ್ನು ಓದಿದ್ದೇನೆ, ಅದು ನನಗೆ ನಿರಾಶೆ ತಂದಿದೆ ಮತ್ತು ದುರದೃಷ್ಟವಶಾತ್ ಅದರಲ್ಲಿ ದ್ರೋಹದ ಭಾವನೆ ಕಾಣಿಸಿದೆ ಎಂದು ಹೇಳಿದ್ದಾರೆ.