ಮಜುಲಿ ದ್ವೀಪ(ಅಸ್ಸೋಂ): ಜಾಧವ್ ಪಯೆಂಗ್ ಒಬ್ಬ ಅಸ್ಸೋಂನ ಬುಡಕಟ್ಟು ಜನಾಂಗದ ಸಾಮಾನ್ಯ ವ್ಯಕ್ತಿ. ಪ್ರಕೃತಿ ಮತ್ತು ಹಸಿರಿನೊಂದಿಗೆ ವಿಶಿಷ್ಟ ಸಂಬಂಧ ಹೊಂದಿರುವ ಇವರು, ಮುಲೈ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಸುತ್ತಲಿನ ಜೀವರಾಶಿಗಳು, ಅರಣ್ಯ ಮತ್ತು ಪ್ರಕೃತಿಗೆ ಧಕ್ಕೆ ಬಂದಾಗ ಇವರ ಮನಸ್ಸು ಅವುಗಳ ಸಂರಕ್ಷಣೆಗೆ ಹಾತೊರೆಯುತ್ತದೆ. ಪರಿಸರ ರಕ್ಷಣೆಯಲ್ಲಿ ಪಯೆಂಗ್ ಅವರ ಸತತ ಪ್ರಯತ್ನವು, ಅವರನ್ನು ಜೀವಂತ ದಂತಕಥೆಯನ್ನಾಗಿಸಿದೆ.
1979ರಲ್ಲಿ ಅಸ್ಸೋಂನ ಗೋಲಘಾಟ್ ಜಿಲ್ಲಾಡಳಿತ, ಕೋಕಿಲಮುಖ್ ಬಳಿಯ ಓವಾನಾ ಚಾಪೋರಿಯಲ್ಲಿ ಅರಣ್ಯನಾಶಕ್ಕಾಗಿ ಯೋಜನೆಯೊಂದನ್ನು ಕೈಗೆತ್ತಿಕೊಂಡಿತ್ತು. ಆಗ ಜಾದವ್ ಪಯೆಂಗ್ ಅವರು ಮರಗಳು ಮತ್ತು ಸಸಿಗಳನ್ನು ನೆಡಲು, ದೊಡ್ಡ ತಂಡದ ಜೊತೆಗೆ ಓವಾನಾ ಚಾಪೋರಿಗೆ ಹೋದರು. ಬಳಿಕ ಅವರ ಜೊತೆಗೆ ಬಂದ ಕಾರ್ಮಿಕರು ಹಿಂದಿರುಗಿದಾಗ, ಜಾಧವ್ ಅಲ್ಲಿ ಸಸ್ಯಗಳನ್ನು ನೋಡಿಕೊಳ್ಳಲು ಮತ್ತು ಪೋಷಿಸಲು ಅಲ್ಲಿಯೇ ಇದ್ದರು. ಆದ್ದರಿಂದ ಈಗ ಈ ಓವಾನಾ ಚಾಪೋರಿಯನ್ನು ಮುಲೈ ಕ್ಯಾಥೋನಿ ಎಂದು ಕರೆಯಲಾಗುತ್ತದೆ.
ಅರಣ್ಯ ಸಂರಕ್ಷಣೆಗಾಗಿ ಮುಲೈ ಅವರ ಈ ಕಾರ್ಯಗಳು 2009ರಲ್ಲಿ ಮುಂಚೂಣಿಗೆ ಬಂದವು. ಅದರ ನಂತರ ನೂರಾರು ಜನರು ಮುಲೈ ಕ್ಯಾಥೋನಿಗೆ ಈ ವಿಶಿಷ್ಟ ಮಾನವ ನಿರ್ಮಿತ ಅರಣ್ಯ ನೋಡಲು ಭೇಟಿ ನೀಡಿದರು. ಈಗ ಮುಲೈ ಕ್ಯಾಥೋನಿಯಲ್ಲಿ 100ಕ್ಕೂ ಹೆಚ್ಚು ಆನೆ, ಅಸಂಖ್ಯಾತ ಜಿಂಕೆಗಳು ಮತ್ತು ನಾಲ್ಕು ರಾಯಲ್ ಬಂಗಾಳ ಹುಲಿಗಳಿವೆ. ಪಯೆಂಗ್ ಅವರು ಅರಣ್ಯ ಸಂರಕ್ಷಣೆಗಾಗಿ ಮಾಡಿದ ಕಾರ್ಯದಿಂದಾಗಿ ವಿಶ್ವ ಸಮುದಾಯದಿಂದ ಮೆಚ್ಚುಗೆ ಪಡೆದ ಹೆಸರಾಗಿದೆ.
2012ರಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯವು ಪಯೆಂಗ್ ಅವರಿಗೆ, ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಎಂಬ ಬಿರುದು ನೀಡಿದೆ. ಹಾಗೂ ಅರಣ್ಯ ಸಂರಕ್ಷಣೆಗಾಗಿ ಅವರು ಮಾಡಿದ ಪ್ರಯತ್ನವನ್ನು ಕೆನಡಾದ ಛಾಯಾಗ್ರಾಹಕ ವಿಲಿಯಂ ಡೌಗ್ಲಾಸ್ ಮೆಕ್‌ಮಾಸ್ಟರ್ ಅವರು, ದಿ ಫಾರೆಸ್ಟ್ ಮ್ಯಾನ್ ಎಂಬ ಸಾಕ್ಷ್ಯಚಿತ್ರ ಚಿತ್ರೀಕರಿಸಿದ್ದಾರೆ.
2013ರಲ್ಲಿ ಕೇನ್ಸ್ ಚಲನಚಿತ್ರೋತ್ಸವದಲ್ಲಿ ದಿ ಫಾರೆಸ್ಟ್ ಮ್ಯಾನ್ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಗೆದ್ದುಕೊಂಡಿತು. 2015ರಲ್ಲಿ ಪಯೆಂಗ್‌ಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ "ಪದ್ಮಶ್ರೀ" ನೀಡಿ ಗೌರವಿಸಲಾಯಿತು. ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ತನ್ನ ಶಾಲಾ ಪಠ್ಯಕ್ರಮದಲ್ಲಿ ಅರಣ್ಯ ಸಂರಕ್ಷಿಸುವ ಪಯೆಂಗ್‌ನ ಪ್ರಯತ್ನ ಒಳಗೊಂಡಿತ್ತು.
ಇತ್ತೀಚೆಗೆ ಯುಎಸ್ಎ ಸರ್ಕಾರವು ಜಾಧವ್ ಪಯೆಂಗ್ ಅವರ ಸಾಧನೆಯನ್ನು, 12ನೇ ತರಗತಿಯ ಪಠ್ಯಕ್ರಮದಲ್ಲಿ "ದಿ ಫಾರೆಸ್ಟ್ ಮ್ಯಾನ್ ಜಾಧವ್ ಪಯೆಂಗ್" ಎಂಬ ಅಧ್ಯಾಯವಾಗಿ ಸೇರಿಸಿದೆ. ಯುಎಸ್ಎದಲ್ಲಿ ಶಿಕ್ಷಕಿಯಾಗಿ ಸೇವೆ ಮಾಡುತ್ತಿರುವ ನಬಾಮಿ ಶರ್ಮಾ, ಅಲ್ಲಿನ ಪಠ್ಯಕ್ರಮದಲ್ಲಿ ಸೇರಿಸಲಾದ ಜಾಧವ್ ಪಯೆಂಗ್ ಅವರ ಅಧ್ಯಾಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಪ್ರಕೃತಿಯ ಮಗನ ಬಗ್ಗೆ ಅಸ್ಸೋಂ ಮಾತ್ರವಲ್ಲದೆ, ಇಡೀ ಭಾರತವೇ ಹೆಮ್ಮೆ ಪಡುತ್ತದೆ. ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ಜಾಧವ್ ಪಯೆಂಗ್ ಮತ್ತು ಅವರ ಮುಲೈ ಕಥೋನಿಯು ಪರಿಸರ ಕಾಳಜಿಯ ಬಗ್ಗೆ ಜಗತ್ತಿಗೆ ಪಾಠವಾಗಿದೆ.