ಮುಂಬೈ: ಕೋಟ್ಯಂತರ ರೂಪಾಯಿ ಹಗರಣದ ಪ್ರಮುಖ ಆರೋಪಿ ಚರ್ಚ್ ಆಫ್ ನಾರ್ತ್ ಇಂಡಿಯಾದ ಬಿಷಪ್ ಪಿ ಸಿ ಸಿಂಗ್ ಅವರನ್ನು ಮಧ್ಯಪ್ರದೇಶದ ಆರ್ಥಿಕ ಅಪರಾಧಗಳ ವಿಭಾಗ(ಇಒಡಬ್ಲ್ಯೂ)ದ ಅಧಿಕಾರಿಗಳು ಮಹಾರಾಷ್ಟ್ರದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಜರ್ಮನಿಯಲ್ಲಿದ್ದ ಬಿಷಪ್ ಭಾರತಕ್ಕೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಅರಿತ ಇಒಡಬ್ಲ್ಯೂ ಅಧಿಕಾರಿಗಳು ಮಹಾರಾಷ್ಟ್ರ ಪೊಲೀಸರಿಗೆ ಮಾಹಿತಿ ನೀಡಿ, ಬಿಷಪ್ರನ್ನು ಬಂಧಿಸಿ ಮಧ್ಯಪ್ರದೇಶದ ಜಬಲ್ಪುರಕ್ಕೆ ಕರೆದೊಯ್ಯುತ್ತಿದ್ದಾರೆ.
ಸೆಪ್ಟೆಂಬರ್ 8 ರಂದು ಮಧ್ಯಪ್ರದೇಶದ ಆರ್ಥಿಕ ಅಪರಾಧ ವಿಭಾಗವು ಬಿಷಪ್ ಸಿಂಗ್ ಅವರ ನಿವಾಸದಲ್ಲಿ ನಡೆಸಿದ ಶೋಧದ ಸಮಯದಲ್ಲಿ 1.65 ಕೋಟಿ ರೂಪಾಯಿ ಮತ್ತು 18,000 ಡಾಲರ್ ಹಣ ಪತ್ತೆಯಾಗಿತ್ತು. ದಾಳಿಯ ವೇಳೆ ಬಿಷಪ್ ಜರ್ಮನಿಯಲ್ಲಿದ್ದರು.
ದಾಳಿಯ ಸಂದರ್ಭದಲ್ಲಿ ಬಿಷಪ್ ಅವರ ಮನೆ ಮತ್ತು ಕಚೇರಿಯಲ್ಲಿ ಚರ್ಚ್ನ ಟ್ರಸ್ಟ್ಗಳ ಗುತ್ತಿಗೆ ನವೀಕರಣ, ತೆರಿಗೆ ಪಾವತಿ ಮಾಡದಿರುವುದು, 17 ಆಸ್ತಿ ದಾಖಲೆಗಳು, 48 ಬ್ಯಾಂಕ್ ಖಾತೆಗಳು ಮತ್ತು 8 ಕಾರುಗಳು ಪತ್ತೆಯಾಗಿದ್ದವು. ಬಿಷಪ್ ಸಿಂಗ್ ಅವರು ಅಧ್ಯಕ್ಷರಾಗಿದ್ದ ಸೊಸೈಟಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ನೀಡಲಾದ ದೂರಿನ ನಂತರ ಈ ದಾಳಿ ನಡೆಸಲಾಗಿತ್ತು.
2004-05 ಮತ್ತು 2011-12 ರ ನಡುವೆ ವಿದ್ಯಾರ್ಥಿಗಳ ಶುಲ್ಕವಾಗಿ ಸಂಗ್ರಹಿಸಲಾದ 2.70 ಕೋಟಿ ರೂಪಾಯಿಗಳನ್ನು ಧಾರ್ಮಿಕ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ ಎಂಬುದನ್ನು ಮಧ್ಯಪ್ರದೇಶ ಪೊಲೀಸರು ಪತ್ತೆ ಮಾಡಿದ್ದರು. ಈ ಹಣವನ್ನು ಬಿಷಪ್ ವೈಯಕ್ತಿಕ ಅಗತ್ಯಗಳಿಗಾಗಿ ಬಳಸಿಕೊಂಡಿದ್ದರು ಎಂದು ವರದಿಯಾಗಿತ್ತು.
ಓದಿ: ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಅಜಯ್ ದೇವಗನ್ ಚಿತ್ರಕ್ಕೆ ಬಹಿಷ್ಕಾರದ ಬಿಸಿ