ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳು ಮೃತಪಟ್ಟಿದ್ದಾರೆ. ರಾಂಬನ್ ಜಿಲ್ಲೆಯ ಬಿಂಗಾರಾ ಗ್ರಾಮದಲ್ಲಿ ಸಂಭವಿಸಿದ ಈ ಭೀಕರ ಅಗ್ನಿ ಅವಘಡದಲ್ಲಿ ನಜ್ಮಾ ಬೇಗಂ ಎಂಬ ಮಹಿಳೆ ಮತ್ತು ಆಕೆಯ ಇಬ್ಬರು ಅಪ್ರಾಪ್ತ ಪುತ್ರಿಯರಾದ ಇಕ್ರಾ ಮತ್ತು ಅಸ್ಮಾ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ. ಮಹಿಳೆಯ ಪತಿ ಇಬ್ರಾಹಿಂ ಮತ್ತು ಮಿರ್ಜಾ ಬೇಗಂ ಗಾಯಗೊಂಡಿದ್ದಾರೆ ಎಂದು ಜಮ್ಮು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಗಾಯಗೊಂಡಿರುವವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದು ಕಡೆ ಈ ಅಗ್ನಿ ಅವಘಡದಲ್ಲಿ ಐದು ಗುಡಿಸಲುಗಳು ಸುಟ್ಟು ಭಸ್ಮವಾಗಿವೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಅಗ್ನಿ ಶಾಮಕದಳಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡಿವೆ. ಘಟನೆ ಬಗ್ಗೆ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಘಟನೆ ಬಗ್ಗೆ ಮೈಕ್ರೋ ಬ್ಲಾಗಿಂಗ್ ಎಕ್ಸ್( ಟ್ವಿಟರ್ನಲ್ಲಿ) ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ‘’ರಾಂಬನ ಬಿಂಗಾರ ಗ್ರಾಮದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದರಿಂದ ತೀವ್ರ ನೋವಾಗಿದೆ. ಮೃತರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುತ್ತಿದ್ದು, ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ‘‘ ಎಂದಿದ್ದಾರೆ.ಇದೇ ವೇಳೆ, ಘಟನೆಯಲ್ಲಿ ಸಂಕಷ್ಟದಲ್ಲಿರುವವರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ. ( ಐಎಎನ್‌ಎಸ್)
ಇನ್ನೊಂದೆಡೆ ಬುಧವಾರ ಮೂವರು ಸಹೋದರಿಯರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿತ್ತು. ನೀರಿನಲ್ಲಿ ಮುಳುಗುತ್ತಿದ್ದ ತಂಗಿಯನ್ನು ರಕ್ಷಣೆ ಮಾಡಲು ಯತ್ನಿಸಿ ಇಬ್ಬರು ಅಕ್ಕಂದಿರೂ ಸಹ ಪ್ರಾಣ ಕಳೆದುಕೊಂಡಿದ್ದರು.
ಮೃತರನ್ನು ನಶಿದಾ (26), ರಾಮ್ಶೀನಾ (23) ಮತ್ತು ರಿಂಶಿ (18) ಎಂದು ಗುರುತಿಸಲಾಗಿದೆ. ಮುನ್ನಾರ್ಕ್ಕಾಡ್ ತಾಲೂಕಿನ ಭೀಮನಾಡ್ ಪೆರುಂಕುಳಂನಲ್ಲಿ ಬೆಳಗ್ಗೆ ಸ್ನಾನಕ್ಕೆಂದು ತೆರಳಿದ್ದರು. ಆದರೆ, ನಂತರ ಮೂವರು ಸಹ ಕಾಣೆಯಾಗಿದ್ದರು. ಕೆರೆ ಬಳಿ ಬಟ್ಟೆ ಮತ್ತು ಇತರ ವಸ್ತುಗಳನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ನೀರಿನಲ್ಲಿ ಹುಡುಕಾಟ ನಡೆಸಿದ್ದರು. ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಶವಗಳು ಪತ್ತೆಯಾಗಿದ್ದವು.
ಇದನ್ನು ಓದಿ:ಬಿಬಿಎಂಪಿ ಅಗ್ನಿ ಅನಾಹುತದಲ್ಲಿ ಗಾಯಗೊಂಡ ಮುಖ್ಯ ಅಭಿಯಂತರ ಶಿವಕುಮಾರ್ ಸಾವು