ಶ್ರೀನಗರ ( ಜಮ್ಮು ಮತ್ತು ಕಾಶ್ಮೀರ): ದೇಶದ ಮೊದಲ ಲಿಥಿಯಂ ನಿಕ್ಷೇಪವು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಪತ್ತೆಯಾದ ಬೆನ್ನಲ್ಲೇ ಸ್ಥಳೀಯರಲ್ಲಿ ಹೊಸ ಕನಸುಗಳು ಚಿಗುರೊಡೆಯುತ್ತಿದೆ. ಇಲ್ಲಿ ಗಣಿಗಾರಿಕೆ ಕಾಮಗಾರಿ ಆರಂಭಗೊಂಡರೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂಬ ಆಶಾಭಾವ ಕಾಣಿವೆ ನಾಡಿನ ಜನರಲ್ಲಿ ಮೂಡಿದೆ.
ಹೌದು, ರಿಯಾಸಿ ಜಿಲ್ಲೆಯ ಸಲಾಲ್ - ಹೈಮಾನಾ ಪ್ರದೇಶದಲ್ಲಿ 5.9 ಮಿಲಿಯನ್ ಟನ್ ಲಿಥಿಯಂ ನಿಕ್ಷೇಪವಿದೆ ಎಂದು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ. ಇದನ್ನು ಗುರುವಾರ ಕೇಂದ್ರ ಗಣಿಗಾರಿಕೆ ಸಚಿವಾಲಯ ಕೂಡ ಖಚಿತ ಪಡಿಸಿದೆ. ಲಿಥಿಯಂ ಒಂದು ನಾನ್ ಫೆರಸ್ ಲೋಹವಾಗಿದೆ. ಇದು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳಲ್ಲಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಈ ಬೆಳವಣಿಗೆ ಸಲಾಲ್‌ನ ಸ್ಥಳೀಯರಲ್ಲಿ ಹರ್ಷದ ಅಲೆ ಎಬ್ಬಿಸಿದೆ. 1975ರಲ್ಲಿ ಅಣೆಕಟ್ಟನ್ನು ನಿರ್ಮಿಸಿದಾಗ ಸಲಾಲ್ ಜಲ ವಿದ್ಯುತ್ ಯೋಜನೆ ಮಾದರಿಯಲ್ಲೇ ಗಣಿಗಾರಿಕೆ ಯೋಜನೆಯು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂಬ ಆಶಾಭಾವ ಇದೆ.
ಈಗಾಗಲೇ ರೈಲು ಯೋಜನೆಯು ಸ್ಥಳೀಯ ಯುವಕರಿಗೆ ಉದ್ಯೋಗವನ್ನು ಒದಗಿಸಿದೆ. ಇದರ ನಡುವೆ ಈಗ ನಿರುದ್ಯೋಗ ಸಮಸ್ಯೆ ಕೂಡ ಹೆಚ್ಚುತ್ತಿದ್ದು, ಸ್ಥಳೀಯರಿಗೆ ಅನುಕೂಲವಾಗುವಂತೆ ಗಣಿಗಾರಿಕೆ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಆರಂಭಿಸಬೇಕೆಂದು ಸ್ಥಳೀಯರಾದ ಬಿಶೆನ್ ಸಿಂಗ್ ಹೇಳಿದ್ದಾರೆ.
ಲಿಥಿಯಂ 'ಪವಾಡ': ಮತ್ತೊಂದೆಡೆ, ಲಿಥಿಯಂ ನಿಕ್ಷೇಪಗಳ ಆವಿಷ್ಕಾರವು 'ಪವಾಡ' ಎಂದೇ ಮತ್ತೊಬ್ಬ ಸ್ಥಳೀಯರಾದ ಗುರುದೀಪ್ ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವ ವಿಶ್ವಾಸ ಇದೆ. ಈ ಲಿಥಿಯಂ ನಿಕ್ಷೇಪ ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಗಣಿ ಇಲಾಖೆಗೆ ನಾವು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಜೊತೆಗೆ ನಿಕ್ಷೇಪ ಯೋಜನೆಗೆ ಸಂಬಂಧಿಸಿದಂತೆ ಅಗತ್ಯವಿರುವ ಮಾನವ ಸಂಪನ್ಮೂಲದ ಬಳಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದೂ ಅವರು ಒತ್ತಾಯಿಸಿದ್ದಾರೆ.
ಹಲ್ಕಾ ಸಲಾಲ್ ಪಂಚಾಯತ್ನ ಸ್ಥಳೀಯ ಸರಪಂಚ್ ಮಹೀಂದ್ರ ಸಿಂಗ್ ಸಹ ಈ ನಿಕ್ಷೇಪದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ಲಿಥಿಯಂ ನಿಕ್ಷೇಪವು ಅಮೂಲ್ಯ ಖನಿಜದ ಮೇಲಿನ ದೇಶದ ಅವಲಂಬನೆ ಕಡಿಮೆ ಮಾಡಲಿದೆ. ಸದ್ಯ ನಾವು ವಿದೇಶದಿಂದ ಈ ಖನಿಜವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಈಗ ನಮ್ಮಲ್ಲಿಯೇ ಈ ನಿಕ್ಷೇಪ ಕಂಡು ಬಂದಿದೆ. ಇದರಿಂದ ಜನರ ಜೀವನವೂ ಬದಲಾಗಲಿದ್ದು, ಇಡೀ ಜಿಲ್ಲೆಗೆ ಅನುಕೂಲವಾಗಲಿದೆ. ನಮ್ಮ ಸಲಾಲ್ ಪ್ರದೇಶವು ಜಗತ್ತಿನಾದ್ಯಂತ ಪ್ರಸಿದ್ಧಿಯನ್ನೂ ಪಡೆಯಲಿದೆ ಎಂದು ಹೇಳಿದರು.
ಸ್ಥಳೀಯ ಡಿಡಿಸಿ ಸದಸ್ಯೆ ರಾಜಕುಮಾರಿ ಪ್ರತಿಕ್ರಿಯಿಸಿ, ನಮ್ಮ ಕಣಿವೆ ನಾಡಿನಲ್ಲಿ ಲಿಥಿಯಂ ನಿಕ್ಷೇಪವು ಸಿಗುವ ಬಗ್ಗೆ ನಾವು ಊಹೆ ಕೂಡ ಮಾಡಿರಲಿಲ್ಲ. ಇದೀಗ ರಿಯಾಸಿಯಲ್ಲಿನ ಊಹಿಸಲಾದ ಈ ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿದೆ. ರಿಯಾಸಿ ಸೆರ್ಸಂದು, ಖೇರಿಕೋಟ್, ರಾಹೋಟ್‌ಕೋಟ್, ದಾರಾಬಿ ಎಂದು ಈ ಖನಿಜ ಬ್ಲಾಕ್‌ನ ಗುರುತಿಸಲಾಗಿದೆ. ಭೂವೈಜ್ಞಾನಿಕ ಸಮೀಕ್ಷೆಯು ಅಲ್ಲಿ 2021-22ರಿಂದ ನಿರೀಕ್ಷಿತ ಕಾರ್ಯ ನಡೆಸುತ್ತಿದೆ. ಖನಿಜದ ಆವಿಷ್ಕಾರವು ಸ್ಥಳೀಯರಲ್ಲಿ ಹೊಸ ಭರವಸೆ ಮೂಡಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ದೇಶದ ಮೊದಲ 'ಲಿಥಿಯಂ' ನಿಕ್ಷೇಪ ಪತ್ತೆ