ದೋಡಾ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪ್ರಜಾಸತ್ತಾತ್ಮಕ ಪ್ರಗತಿಪರ ಆಜಾದ್ ಪಕ್ಷದ ಮುಖ್ಯಸ್ಥ ಗುಲಾಂ ನಬಿ ಆಜಾದ್ ಆರ್ಟಿಕಲ್ 370 ರದ್ದತಿ ಕುರಿತು ಭಾನುವಾರ ಮಾತನಾಡಿದ್ದಾರೆ. ಆರ್ಟಿಕಲ್ 370 ರದ್ದತಿಯನ್ನು ವಿರೋಧ ಮಾಡುವವರಿಗೆ ಕೇಂದ್ರಾಡಳಿತ ಪ್ರದೇಶದ ಇತಿಹಾಸ ಮತ್ತು ಭೌಗೋಳಿಕತೆಯ ಅರಿವಿಲ್ಲ ಎಂದಿದ್ದಾರೆ.
ಆರ್ಟಿಕಲ್ 370 ಯಾವುದೇ ನಿರ್ದಿಷ್ಟ ಪ್ರದೇಶ, ಪ್ರಾಂತ್ಯ ಅಥವಾ ಧರ್ಮಕ್ಕೆ ಸೀಮಿತವಲ್ಲ. ಎಲ್ಲರಿಗೂ ಸಮಾನವಾಗಿರಲಿದೆ. ನನಗೆ ಸುಪ್ರೀಂ ಕೋರ್ಟ್ ಮೇಲೆ ಸಂಪೂರ್ಣ ನಂಬಿಕೆಯಿದೆ. ಆರ್ಟಿಕಲ್ 370 ರ ರದ್ದತಿಯ ಕ್ರಮದ ಕುರಿತು ಎಲ್ಲ ಅಂಶಗಳನ್ನು ಪರಿಶೀಲಿಸುತ್ತದೆ ಎಂದು ನಾನು ನಂಬುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಜಮ್ಮು ಮತ್ತು ಕಾಶ್ಮೀರದ ವಿಶೇಷಸ್ಥಾನಮಾನ 370ನೇ ವಿಧಿ ರದ್ದು ಮಾಡಿ, 2 ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಾಗಿಸಿದ್ದರ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಪ್ರಾರಂಭಿಸಿದೆ. ಆಗಸ್ಟ್ 2ರಿಂದ ಸುಪ್ರೀಂ ಕೋರ್ಟ್ ನಿತ್ಯ ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದೆ. ಪರ - ವಿರೋಧದ ವಾದಗಳನ್ನು ಆಲಿಸುತ್ತಿದೆ. ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠ ಅರ್ಜಿಗಳ ವಿಚಾರಣೆ ಮುಂದುವರೆಸಿದೆ. ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿ ರದ್ದು ವಿರೋಧಿಸಿ ಹಲವಾರು ಅರ್ಜಿಗಳು ಸುಪ್ರೀಂಕೋರ್ಟ್ಗೆ ಸಲ್ಲಿಕೆ ಆಗಿವೆ.
ಅವೆಲ್ಲವನ್ನು ಒಟ್ಟುಗೂಡಿಸಿ ಸುಪ್ರೀಂನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಸೂರ್ಯಕಾಂತ್ ಮತ್ತು ಸಂಜಯ್ ಕಿಶನ್ ಕೌಲ್ ಅವರಿದ್ದ ಪೀಠವು ವಿಚಾರಣೆ ಆರಂಭಿಸಿದೆ. ಈ ಮಧ್ಯೆ ಗುಲಾಂ ನಬಿ ಆಜಾದ್ ಈ ಹೇಳಿಕೆಯನ್ನು ನೀಡಿದ್ದಾರೆ. ಮಾಧ್ಯಮದ ಜೊತೆ ಸಂವಿಧಾದನ 370 ನೇ ವಿಧಿಯನ್ನು ರದ್ದು ಮಾಡಿರುವ ಬಗ್ಗೆ ಮಾತನಾಡಿರುವ ಅವರು, ಪ್ರಾದೇಶಿಕ ಪಕ್ಷಗಳ ಹೆಸರನ್ನು ಹೇಳದೇ ವಾಗ್ದಾಳಿ ನಡೆಸಿದರು. 370 ನೇ ವಿಧಿಯ ರದ್ದತಿಯನ್ನು ವಿರೋಧಿಸುತ್ತಿರುವವರು ನೆಲದ ಪರಿಸ್ಥಿತಿ ಮತ್ತು ಜಮ್ಮು ಮತ್ತು ಕಾಶ್ಮೀರದ ಇತಿಹಾಸ ಮತ್ತು ಭೌಗೋಳಿಕತೆಯ ಬಗ್ಗೆ ಅವರಿಗೆ ತಿಳಿದಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಇದಕ್ಕೂ ಮುನ್ನ, ಬಿಜೆಪಿ ಅಧಿಕೃತ ಪ್ರಕಟಣೆಯಲ್ಲಿ ' ಆರ್ಟಿಕಲ್ 370 ರ ರದ್ದತಿ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ, ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ತಂದಿದೆ ಎಂದು ಹೇಳಿದೆ. ಹಾಗೆ 2019 ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನ - ಮಾನವನ್ನು ತೆಗದು ಹಾಕಲಾಗಿದ್ದು, 2023 ಆಗಸ್ಟ್ 5 ಕ್ಕೆ 4 ವರ್ಷ ಪೂರ್ಣಗೊಂಡಿದೆ. ಈ ಸಂಬಂಧ ಶನಿವಾರ ಈ ದಿನದ ಆಚರಣೆಯನ್ನು ಭರ್ಜರಿಯಾಗಿ ಆಚರಿಸಲಾಗಿದೆ. ಕೆಲವು ಪಕ್ಷಗಳು ಅದನ್ನು ವಿರೋಧಿಸುತ್ತಲೇ ಇವೆ.
ಅಲ್ಲದೇ ಮೊನ್ನೆ, ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ, ಮೆಹಬೂಬಾ ಮುಫ್ತಿ ನನ್ನ ಪಕ್ಷದ ಹಿರಿಯ ನಾಯಕರೊಂದಿಗೆ ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಎಂದಿನಂತೆ ಯಾವುದೇ ಸಮಸ್ಯೆಯಿಲ್ಲದೇ ಸಹಜವಾಗಿಯೇ ಇದೆ ಎಂದು ಕೇಂದ್ರ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ಆದರೆ, ಇದು ನಿಜವಲ್ಲ. ನಮ್ಮ ಆರೋಪಕ್ಕೆ ಪುಷ್ಟಿ ನೀಡುವಂತೆ, ಇಂದು ನಡೆದ ಘಟನೆ ಎಲ್ಲವನ್ನು ಬಹಿರಂಗ ಪಡಿಸಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ದೆಹಲಿ ಅಧಿಕಾರಿಗಳ ಮೇಲಿನ ನಿಯಂತ್ರಣ ವಿಧೇಯಕ ವಿಚಾರ: ಇಂದು ಇಂಡಿಯಾ ಮಹತ್ವದ ಸಭೆ