ಶ್ರೀನಗರ(ಜಮ್ಮು ಕಾಶ್ಮೀರ): ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರಕ್ಕೆ ಭೇಟಿ ನೀಡಿದ ದಿನವೇ ಭಯೋತ್ಪಾದನಾ ದಾಳಿ ನಡೆದಿದೆ. ಇಲ್ಲಿನ ಕಾರಾಗೃಹ ಅಧಿಕಾರಿ ಹೇಮಂತ್ಕುಮಾರ್ ಅವರನ್ನು ಸೋಮವಾರ ಅವರ ನಿವಾಸದಲ್ಲಿಯೇ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಇದರ ಜವಾಬ್ದಾರಿಯನ್ನು ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫೋರ್ಸ್(ಪಿಎಎಫ್ಎಫ್) ಹೊತ್ತುಕೊಂಡಿದ್ದು, ಕೇಂದ್ರ ಗೃಹ ಸಚಿವರಿಗೆ ಇದು ಸಣ್ಣ ಉಡುಗೊರೆ ಎನ್ನುವ ಮೂಲಕ ಉದ್ಧಟತನದ ಮಾತನ್ನಾಡಿದೆ.
ಕೊಲೆ ಮಾಡಿದ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಮಾಡಿದ ಪಿಎಎಫ್ಎಫ್, ಇದು ಆರಂಭ ಅಷ್ಟೇ. ನಮ್ಮ ವಿಶೇಷ ದಳವು ಜಮ್ಮುವಿನ ಉದಯವಾಲಾದಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆ ಮಾಡಿದೆ. ಕಾರಾಗೃಹ ಇಲಾಖೆಯ ಡಿಜಿಪಿ ಲೋಹಿಯಾ ಅವರನ್ನು ಕೊಂದುಹಾಕಿದೆ. ಇದು ದೊಡ್ಡ ಜಯವಾಗಿದೆ ಎಂದು ಉಲ್ಲೇಖಿಸಿದೆ.
ಜಮ್ಮು ಕಾಶ್ಮೀರಕ್ಕೆ ಬಂದ ಸ್ಥಳೀಯರಲ್ಲದವರ ಮೇಲಿನ ದಾಳಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡದ ಇತ್ತೀಚಿನ ಎಲ್ಲ ದಾಳಿಗಳೂ ತನ್ನದೇ ಕೃತ್ಯ ಎಂದು ಪಿಎಎಫ್ಎಫ್ ಉಗ್ರ ಸಂಘಟನೆ ಒಪ್ಪಿಕೊಂಡಿದೆ. ಕಣಿವೆಯಲ್ಲಿ ದೊಡ್ಡ ಮಟ್ಟದ ಮತ್ತಷ್ಟು ದಾಳಿಗಳು ನಡೆಯಲಿವೆ. ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಬಾಂಬ್ ಬೀಳಲಿವೆ ಎಂದು ಅದು ಎಚ್ಚರಿಕೆಯನ್ನೂ ರವಾನಿಸಿದೆ.
ಅಮಿತ್ ಶಾಗೆ ಉಡುಗೊರೆ: ಕಾಶ್ಮೀರಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಾರಾಗೃಹ ಅಧಿಕಾರಿ ಹೇಮಂತ್ಕುಮಾರ್ ಬರ್ಬರ ಹತ್ಯೆ ಉಡುಗೊರೆ. ಬಲವಾದ ಭದ್ರತಾ ವ್ಯವಸ್ಥೆಯ ಮಧ್ಯೆ ಸಚಿವರು ಇಲ್ಲಿಗೆ ಭೇಟಿ ನೀಡಿದ್ದಾರೆ. ಇನ್ನು ಮುಂದೆಯೂ ಇದು ಚಾಲ್ತಿಯಲ್ಲಿರುತ್ತದೆ ಎಂದು ಉಗ್ರ ಸಂಘಟನೆ ಹೇಳಿದೆ.
ಸಹಾಯಕನಿಂದಲೇ ಹತ್ಯೆ: ಕಾರಾಗೃಹ ಅಧಿಕಾರಿ ಹೇಮಂತ್ ಲೋಹಿಯಾ ಅವರ ಹತ್ಯೆಯ ಜವಾಬ್ದಾರಿಯನ್ನು ಜೈಶ್ ಉಗ್ರಗಾಮಿ ಸಂಘಟನೆಯ ನೆರಳಿನಂತಿರುವ ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫೋರ್ಸ್ ಒಪ್ಪಿಕೊಂಡಿದ್ದರೂ, ಅಧಿಕಾರಿಯ ಮನೆಯ ಸಹಾಯಕನೇ ಇದರಲ್ಲಿ ಪ್ರಮುಖ ಆರೋಪಿ ಎಂದು ಪೊಲೀಸರು ಶಂಕಿಸಿದ್ದಾರೆ. ತಲೆಮರೆಸಿಕೊಂಡಿರುವ ಸಹಾಯಕನ ಪತ್ತೆಗೆ ಬಲೆ ಬೀಸಲಾಗಿದೆ.
ಓದಿ: ಕಾಶ್ಮೀರ ಕಾರಾಗೃಹ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಶವವಾಗಿ ಪತ್ತೆ: ಕೊಲೆ ಶಂಕೆ