ತವಾಂಗ್ (ಅರುಣಾಚಲ ಪ್ರದೇಶ): ಪೂರ್ವ ಲಡಾಖ್ನಲ್ಲಿ ಚೀನಾ-ಭಾರತ ನಡುವಿನ ಗಡಿ ಬಿಕ್ಕಟ್ಟು ಮುಂದುವರೆದಿದ್ದು, ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು (ಐಟಿಬಿಪಿ) ಕಟ್ಟೆಚ್ಚರ ವಹಿಸಿದ್ದಾರೆ.
ಕಳೆದ ಆಗಸ್ಟ್ ತಿಂಗಳಲ್ಲಿ ಪೂರ್ವ ಲಡಾಖ್ನಲ್ಲಿ ನಡೆದ ಸಂಘರ್ಷದಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಪಡೆಗೆ ಭಾರತೀಯ ಸೇನೆ ತಕ್ಕಶಾಸ್ತಿ ಮಾಡಿದೆ. ಆ ಬಳಿಕ ಗಡಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ಭಾರತ ನಿಯೋಜನೆ ಮಾಡಿದೆ. ತವಾಂಗ್, ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿಂದ ಚೀನಾದ ಭೂಪ್ರದೇಶವನ್ನು ನೋಡಬಹುದಾಗಿದೆ.
ಈ ರೀತಿಯ ಘಟನೆಗಳು (ಪೂರ್ವ ಲಡಾಖ್ ಸಂಘರ್ಷ) ಸಂಭವಿಸಿದಾಗ, ನಾವು ಹೆಚ್ಚಿನ ಎಚ್ಚರಿಕೆಯಿಂದ ಕ್ರಮ ಕೈಗೊಳ್ಳಬೇಕು. ಮತ್ತೆ ಇಂತಹ ಅನಿರೀಕ್ಷಿತ ಘಟನೆಗಳು ನಡೆಯಲು ಅನುಮತಿಸುವುದಿಲ್ಲ. ನಮ್ಮ ತಂಡ ತವಾಂಗ್ ಪ್ರದೇಶದಲ್ಲಿ ತೀವ್ರ ನಿಗಾ ಇರಿಸಿದ್ದು, ಚೀನಾ ಹಠಾತ್ ದಾಳಿ ನಡೆಸಲು, ನಮ್ಮನ್ನು ಅಚ್ಚರಿಗೊಳಿಸಲು ಸಾಧ್ಯವಿಲ್ಲ ಎಂದು ಐಟಿಬಿಪಿ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ರಕ್ತ ಹೆಪ್ಪುಗಟ್ಟಿಸುವ ಲಡಾಖ್ ಗಡಿಯಲ್ಲಿ ಸೇನೆ ನಿಯೋಜನೆ: ಭಾರತ-ಚೀನಾ ಬೊಕ್ಕಸಕ್ಕೆ ಹೊರೆ - ಪರಿಹಾರ ಯಾವುದು?
ಮೈಕೊರೆಯುವ ಭೀಕರ ಚಳಿ ಪರಿಸ್ಥಿತಿಯನ್ನು ಕಠಿಣಗೊಳಿಸಬಹುದು. ಆದರೆ ದೇಶವನ್ನು ರಕ್ಷಿಸುವ ಹೊಣೆ ಹೊತ್ತಿದ್ದೇವೆ ನಾವು. ನಮ್ಮ ಸಿಬ್ಬಂದಿ ಗಡಿಯ ಮೇಲೆ ಸದಾ ಕಣ್ಣಿಟ್ಟಿರುತ್ತಾರೆ. ಎಂತಹದ್ದೇ ಪರಿಸ್ಥಿತಿ ಬಂದರೂ ಕ್ರಮ ಕೈಗೊಳ್ಳಲು ಸಿದ್ಧರಿರುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.