ನವದೆಹಲಿ: ಕಳೆದ ವರ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಬಳಿ ಸಂಗ್ರಹವಾಗಿದ್ದ ಸ್ಮರಣಿಕೆಗಳನ್ನು ಇ - ಹರಾಜು ಮಾಡಿದಾಗ, ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರ ಜಾವೆಲಿನ್ ಅನ್ನು ಬಿಸಿಸಿಐ 1.5 ಕೋಟಿ ರೂಪಾಯಿ ಕೊಟ್ಟು ಖರೀದಿಸಿತ್ತು ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೋಕಿಯೊ ಒಲಿಂಪಿಕ್ ನಂತರ ಪ್ರಧಾನ ಮಂತ್ರಿಗಳು ಎಲ್ಲ ಅಥ್ಲೀಟ್ಗಳಿಗೆ ಔತಣಕೂಟ ಏರ್ಪಡಿಸಿದ ಸಂದರ್ಭದಲ್ಲಿ ಚೋಪ್ರಾ ತಮ್ಮ ಜಾವೆಲಿನ್ ಅನ್ನು ಪ್ರಧಾನಿಗೆ ಕಾಣಿಕೆ ನೀಡಿದ್ದರು. ಇ-ಹರಾಜಿನಲ್ಲಿ ಈ ಜಾವೆಲಿನ್ ಮಾತ್ರವಲ್ಲದೇ ಇನ್ನೂ ಹಲವಾರು ವಸ್ತುಗಳನ್ನು ಮಾರಾಟ ಮಾಡಲಾಗಿತ್ತು ಹಾಗೂ ಇದರಿಂದ ಬಂದ ಹಣವನ್ನು ನಮಾಮಿ ಗಂಗೆ ಯೋಜನೆಗೆ ನೀಡಲಾಗಿತ್ತು. ಈ ಹರಾಜು ಸೆಪ್ಟೆಂಬರ್ ಮತ್ತು ಅಕ್ಟೋಬರ್ 2021ರ ಮಧ್ಯೆ ನಡೆಸಲಾಗಿತ್ತು. ಗಂಗಾನದಿಯನ್ನು ಸ್ವಚ್ಛಗೊಳಿಸುವುದು ಮತ್ತು ಅದರ ಸಂರಕ್ಷಣೆಗಾಗಿ 2014ರಲ್ಲಿ ನಮಾಮಿ ಗಂಗೆ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ನೀರಜ್ ಅವರ ಜಾವೆಲಿನ್ಗೆ ಬಿಸಿಸಿಐ ವಿನ್ನಿಂಗ್ ಬಿಡ್ ಮಾಡಿತ್ತು. ಇದು ಮಾತ್ರವಲ್ಲದೇ ಬಿಸಿಸಿಐ ಇನ್ನೂ ಅನೇಕ ಸ್ಮರಣಿಕೆಗಳಿಗಾಗಿ ಬಿಡ್ ಮಾಡಿತ್ತು. ನಮಾಮಿ ಗಂಗೆ ಯೋಜನೆ ಅತ್ಯಂತ ಉತ್ತಮ ಯೋಜನೆಯಾಗಿದ್ದು, ದೇಶದ ಮುಂಚೂಣಿ ಕ್ರೀಡಾ ಸಂಸ್ಥೆಯಾದ ಬಿಸಿಸಿಐ ದೇಶ ಹಿತಕ್ಕಾಗಿ ಈ ಕ್ರಮ ತೆಗೆದುಕೊಂಡಿತ್ತು ಎಂದು ಬಿಸಿಸಿಐ ಹಿರಿಯ ಅಧಿಕಾರಿ ಹೇಳಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಮೊದಲ ಅಲೆಯ ಸಂದರ್ಭದಲ್ಲಿ ಬಿಸಿಸಿಐ ಪಿಎಂ ಕೇರ್ಸ್ ನಿಧಿಗೆ 51 ಕೋಟಿ ರೂಪಾಯಿಗಳನ್ನು ನೀಡಿತ್ತು. ಚೋಪ್ರಾ ಅವರ ಜಾವೆಲಿನ್‌ನ ಹೊರತಾಗಿ, ಭಾರತೀಯ ಪ್ಯಾರಾಲಿಂಪಿಕ್ ತಂಡದಿಂದ ಹಸ್ತಾಕ್ಷರದ ಅಂಗವಸ್ತ್ರವನ್ನು ಬಿಸಿಸಿಐ 1 ಕೋಟಿ ರೂಪಾಯಿಗೆ ಖರೀದಿಸಿತ್ತು.
ಕಳೆದ ವರ್ಷ ನಡೆದ ಹರಾಜಿನಲ್ಲಿ ಕ್ರೀಡಾ ಸಂಗ್ರಹಣೆ ಸೇರಿದಂತೆ 1348 ಸ್ಮರಣಿಕೆಗಳನ್ನು ಇ - ಹರಾಜಿಗೆ ಹಾಕಲಾಗಿದ್ದು, ಒಟ್ಟು 8600 ಬಿಡ್‌ಗಳು ಬಂದಿದ್ದವು. ಇತ್ತೀಚೆಗೆ, ಚೋಪ್ರಾ ಅವರು ಟೋಕಿಯೊದಲ್ಲಿ ಒಲಿಂಪಿಕ್ ಚಿನ್ನ ಗೆಲ್ಲಲು ಬಳಸಿದ ಜಾವೆಲಿನ್ ಅನ್ನು ಲೌಸನ್ನೆ ಮೂಲದ ಒಲಿಂಪಿಕ್ ಮ್ಯೂಸಿಯಂಗೆ ದಾನ ಮಾಡಿದ್ದರು. ಕ್ರೀಡಾಕೂಟದ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಇದನ್ನು ದೃಢಪಡಿಸಲಾಗಿದೆ.