ನವದೆಹಲಿ: ಕೋವಿಡ್ ಸಾಂಕ್ರಾಮಿಕದ ಬಿಕ್ಕಟ್ಟಿನ ಈ ಸಮಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ನಿಲ್ಲುವುದು ಅಗತ್ಯ, ಇದು ಟೀಕೆ ಮಾಡುವ ಸಮಯವಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.
ಕೋವಿಡ್ ನಿರ್ವಹಣೆಯ ಕುರಿತಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಮಧ್ಯೆ ನಿರಂತರವಾಗಿ ವಾಗ್ಯುದ್ಧ ನಡೆಯುತ್ತಿದ್ದು, ಈ ಮಧ್ಯೆ ಕಪಿಲ್ ಸಿಬಲ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.
"ಇದು ಟೀಕೆಯ ಸಮಯವಲ್ಲ, ಇದು ಒಗ್ಗಟ್ಟಾಗಿ ನಿಲ್ಲುವ ಸಮಯ. ಇಡೀ ಭಾರತವೇ ಒಗ್ಗಟ್ಟಾಗುವುದು ಇಂದಿನ ಅಗತ್ಯ. ಕೋವಿಡ್ ಮಹಾಮಾರಿಯ ಮೇಲೆ ನಾವು ಜಯಗಳಿಸಿದ ನಂತರ ಯಾರು ಶಕ್ತಿವಂತರು, ಯಾರು ಸರಿಯಾಗಿದ್ದರು ಎಂಬುದನ್ನು ಆಮೇಲೆ ನೋಡೋಣ." ಎಂದು ಸಿಬಲ್ ಟ್ವೀಟ್ ಮಾಡಿದ್ದಾರೆ.
"ಸಾಂಕ್ರಾಮಿಕ ಬಿಕ್ಕಟ್ಟಿನ ಸಮಯದಲ್ಲಿ ಪ್ರಮುಖ ವಿಷಯಗಳತ್ತ ಗಮನ ಸೆಳೆಯುವುದು ಹಾಗೂ ಸರ್ಕಾರಕ್ಕೆ ಸಲಹೆ ನೀಡುವುದು ಪ್ರತಿಪಕ್ಷಗಳ ಕರ್ತವ್ಯವಾಗಿದೆ. ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಪ್ರಮುಖ ನಾಯಕರಾದ ರಾಹುಲ್ ಹಾಗೂ ಸೋನಿಯಾ ಗಾಂಧಿಯವರ ಪೊಳ್ಳು ಹಾಗೂ ಕ್ಷುಲ್ಲಕ ವರ್ತನೆಯಿಂದ ಕಾಂಗ್ರೆಸ್ ಅನ್ನು ನೆನಪಿಟ್ಟುಕೊಳ್ಳಲಾಗುತ್ತದೆ." ಎಂಬ ಒಕ್ಕಣೆಯ ಪತ್ರವೊಂದನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಸೋನಿಯಾ ಅವರಿಗೆ ಬರೆದಿದ್ದರು.
ಮಂಗಳವಾರ ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್, "ಬಿಜೆಪಿ ಅಹಂಕಾರಿಯಾಗಿದೆ." ಎಂದು ಹೇಳಿತ್ತು.
ಇದಕ್ಕೂ ಮುನ್ನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಯ್ ಮಕೆನ್ ಅವರು ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಿಹಾರದ ಬಕ್ಸಾರ್ ಜಿಲ್ಲೆಯ ಗಂಗಾನದಿಯಲ್ಲಿ ಶವಗಳು ತೇಲಿ ಬರುತ್ತಿದ್ದು, ದೇಶದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಅವರು ಟೀಕಾಪ್ರಹಾರ ನಡೆಸಿದ್ದರು.