ಬೊಕಾಖಾಟ್ (ಅಸ್ಸೋಂ): ಅಸ್ಸೋಂನಲ್ಲಿ ಮತ್ತೆ 'ಡಬಲ್ ಇಂಜಿನ್ ಎನ್‌ಡಿಎ ಸರ್ಕಾರ' ಹಾಗೂ ಎರಡನೇ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಅಸ್ಸೋಂನ ಬೊಕಾಖಾಟ್ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಕೇಂದ್ರದಲ್ಲಿ ಮತ್ತು ಅಸ್ಸೋಂನಲ್ಲಿ ಕಾಂಗ್ರೆಸ್ನ ಡಬಲ್ ಇಂಜಿನ್ ಸರ್ಕಾರವಿದ್ದಾಗ ದುಪ್ಪಟ್ಟು ನಿರ್ಲಕ್ಷ್ಯ ಮತ್ತು ದುಪ್ಪಟ್ಟು ಭ್ರಷ್ಟಾಚಾರ ಇತ್ತು. ಕಾಂಗ್ರೆಸ್ ಎಂದರೆ ಅಸ್ಥಿರತೆ, ಭ್ರಷ್ಟಾಚಾರ ಎಂಬುದನನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಅವರಿಗೆ ಯಾವುದೇ ಒಳ್ಳೆಯದನ್ನು ಮಾಡುವ ದೃಷ್ಟಿ ಅಥವಾ ಉದ್ದೇಶವಿಲ್ಲ ಎಂದು ಆರೋಪಿಸಿದರು.
ಎನ್‌ಡಿಎನ ಡಬಲ್ ಎಂಜಿನ್ ಸರ್ಕಾರವು ಶೌಚಾಲಯ ವ್ಯವಸ್ಥೆ, ಉಚಿತ ವಿದ್ಯುತ್ - ಎಲ್‌ಪಿಜಿ ಗ್ಯಾಸ್ - ವೈದ್ಯಕೀಯ ಚಿಕಿತ್ಸೆಯಂತಹ ಹಲವಾರು ಸೌಲಭ್ಯಗಳನ್ನು ಬಡ ಜನರಿಗೆ ನೀಡಿದೆ. ಹಿಂದಿನ ಆಡಳಿತದ ಅವಧಿಯಲ್ಲಿ ನಿಮ್ಮ ರಾಜ್ಯವನ್ನು ಕಾಂಗ್ರೆಸ್ ಲೂಟಿ ಮಾಡದಂತೆ ಹೇಗೆ ಉಳಿಸಿಕೊಳ್ಳುವುದು ಎಂಬುದೇ ಪ್ರಶ್ನೆಯಾಗಿತ್ತು. ಆದರೆ ಎನ್‌ಡಿಎ ಸರ್ಕಾರವು ಅಸ್ಸೋಂ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದೆ ಎಂದು ಕಾಂಗ್ರೆಸ್ ವಿರುದ್ಧ ಮೋದಿ ಹರಿಹಾಯ್ದರು
ಇದನ್ನೂ ಓದಿ: ಒಬ್ಬ ಚಾಯ್ವಾಲಾ ಅಲ್ದೇ ಮತ್ತ್ಯಾರು ನಿಮ್ಮ ನೋವು ಅರ್ಥ ಮಾಡ್ಕೊಳ್ತಾರೆ?: ಅಸ್ಸೋಂನಲ್ಲಿ ಮೋದಿ ಪ್ರಶ್ನೆ
ಕಾಂಗ್ರೆಸ್ ಬೆಂಬಲಿತ ಕಳ್ಳ ಬೇಟೆಗಾರರಿಂದ ರಾಜ್ಯದ ಖಡ್ಗಮೃಗಗಳನ್ನು ಬಿಜೆಪಿ ಉಳಿಸಿದೆ. ಬ್ರಹ್ಮಪುತ್ರ ನದಿಯ ಎರಡೂ ತೀರಗಳಲ್ಲಿ ಆಧುನಿಕ ಸೇತುವೆಗಳನ್ನು ಬಿಜೆಪಿ ಸರ್ಕಾರ ನಿರ್ಮಿಸುತ್ತಿದೆ. ಹಿಂದಿನ ಸರ್ಕಾರದ ಅವಧಿಯ ಅಪೂರ್ಣ ಸೇತುವೆಗಳ ಕಾಮಗಾರಿ ಪೂರ್ಣಗೊಳ್ಳುತ್ತಿವೆ. ರಾಜ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸಿದ ಕೀರ್ತಿ ಎನ್‌ಡಿಎ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಪ್ರಧಾನಿ ಹೇಳಿದರು.
ಅಸ್ಸೋಂನಲ್ಲಿ ಮಾರ್ಚ್ 27ರಿಂದ ಏಪ್ರಿಲ್ 6ರವರೆಗೆ ಮೂರು ಹಂತಗಳಲ್ಲಿ 126 ಕ್ಷೇತ್ರಗಳಿಗೆ ವಿಧಾನಸಭಾ ಚುನಾವಣೆ ನಡೆಯಲಿದೆ.