ಬೆಂಗಳೂರು : ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಗಗನನೌಕೆಯ ನಾಲ್ಕನೇ ಕಕ್ಷೆ ಬದಲಾವಣೆ ಪ್ರಕ್ರಿಯೆ (fourth orbit raising maneuver) ಗುರುವಾರ ಯಶಸ್ವಿಯಾಗಿ ಪೂರ್ಣಗೊಂಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಗುರುವಾರ ನೌಕೆಯನ್ನು ಚಂದ್ರನಲ್ಲಿಗೆ ತಲುಪಿಸುವ ನಾಲ್ಕನೇ ಪ್ರಕ್ರಿಯೆ ಮುಗಿಸಿದ್ದಾರೆ. ಈ ಕೆಲಸವನ್ನು ಬೆಂಗಳೂರು ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC)ನಿಂದ ಮಾಡಲಾಗಿದೆ.
ಚಂದ್ರಯಾನ ತನ್ನ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಜುಲೈ 25ರಂದು ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಮುಂದಿನ ಫೈರಿಂಗ್ ಯೋಜನೆ ಇದೆ. ಅಂತಾರಾಷ್ಟ್ರೀಯ ಚಂದ್ರ ದಿನದ ಸಂದರ್ಭದಲ್ಲಿ ಭಾರತವು ಚಂದ್ರಯಾನ-3 ಅನ್ನು ಚಂದ್ರನಲ್ಲಿಗೆ ತಲುಪಿಸುತ್ತಿದೆ. ಪ್ರಸ್ತುತ, ಗಗನನೌಕೆ ಭೂಮಿಯಿಂದ 71,351 ಕಿಮೀ x 233 ಕಿಮೀ ದೂರದ ಕಕ್ಷೆಯಲ್ಲಿದೆ ಎಂದು ಇಸ್ರೋ ಹೇಳಿದೆ.
ಇದನ್ನೂ ಓದಿ : ಚಂದ್ರನ ಮೇಲೆ ಮಾನವ ವಾಸಸ್ಥಾನದ ಸಾಧ್ಯತೆಗಳ ಬಗ್ಗೆ ಚಂದ್ರಯಾನ 3 ಅನ್ವೇಷಿಸಲಿದೆ : ಕೇಂದ್ರ ಸಚಿವ ಜಿತೇಂದ್ರ ಸಿಂಗ್
ಇದಕ್ಕೂ ಮುನ್ನ ಜುಲೈ 15ರಂದು ನೌಕೆ ಭೂಮಿಯ ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿತ್ತು. ಇದರ ನಂತರ ಜುಲೈ 17ರಂದು ಭೂಮಿಯ ಎರಡನೇ ಕಕ್ಷೆ ಮತ್ತು ಜುಲೈ 18ರಂದು ಭೂಮಿಯ ಮೂರನೇ ಕಕ್ಷೆಯನ್ನು ಯಶಸ್ವಿಯಾಗಿ ಸೇರಿದೆ.
ಇದನ್ನೂ ಓದಿ : ವಿಮಾನದಿಂದ ಐತಿಹಾಸಿಕ ಚಂದ್ರಯಾನ 3 ಉಡಾವಣೆಯ ದೃಶ್ಯ ಸೆರೆಹಿಡಿದ ಪ್ರಯಾಣಿಕ : ವೈರಲ್ ವಿಡಿಯೋ
ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸುವುದು ಯಾವಾಗ? : ಜುಲೈ 14ರಂದು ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಜಿಎಸ್ಎಲ್ವಿ ಮಾರ್ಕ್ 3 (ಎಲ್ವಿಎಂ 3) ಹೆವಿ ಲಿಫ್ಟ್ ಉಡಾವಣಾ ವಾಹನದಿಂದ ಯಶಸ್ವಿಯಾಗಿ ಬಹುನಿರೀಕ್ಷಿತ ಚಂದ್ರಯಾನ-3 ಮಿಷನ್ ಉಡಾವಣೆ ಮಾಡಲಾಯಿತು. ಮಧ್ಯಾಹ್ನ 2.35ಕ್ಕೆ ಸರಿಯಾಗಿ ಉಡಾವಣೆಗೊಂಡ 17 ನಿಮಿಷಗಳ ನಂತರ ಉಪಗ್ರಹವು ನಿಖರವಾಗಿ ಭೂಮಿಯ ಕಕ್ಷೆಗೆ ಸೇರಿತ್ತು. ಎಲ್ಲವೂ ಸರಿಯಾಗಿಯೇ ನಡೆದರೆ ಮುಂದಿನ ತಿಂಗಳ ಆಗಸ್ಟ್ 23ರಂದು ಸಂಜೆ 5:47ಕ್ಕೆ ಚಂದ್ರಯಾನ ನೌಕೆಯಲ್ಲಿರುವ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ ಎಂದು ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಹೇಳಿದ್ದಾರೆ. ಚಂದ್ರನಿಗೆ 5 ಬಾರಿ ಪ್ರದಕ್ಷಿಣೆ ಹಾಕಿದ ಬಳಿಕ ಇಳಿಯಬೇಕಾದ ಲ್ಯಾಂಡರ್ ಮಾಡ್ಯೂಲ್, ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಡುತ್ತದೆ. ನಂತರ ಪ್ರೊಪಲ್ಷನ್ ಮಾಡ್ಯೂಲ್ ಅದೇ ಕಕ್ಷೆಯಲ್ಲೇ ಸುತ್ತುವುದನ್ನು ಮುಂದುವರಿಸುತ್ತದೆ. ಲ್ಯಾಂಡರ್ ನಿಧಾನಕ್ಕೆ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ : Chandrayaan 3 Mission Update : ಚಂದ್ರಯಾನ 3 ಬಾಹ್ಯಾಕಾಶ ನೌಕೆ ಉತ್ತಮವಾಗಿದೆ ಎಂದ ಇಸ್ರೋ