ಮಾಯಾಪುರ್ (ಪ.ಬಂ): ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯವನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಎಲ್ಲೆಡೆ ಖಂಡನೆ ವ್ಯಕ್ತವಾಗಿದೆ.
ಈ ನಡುವೆ ಇಂಟರ್ನ್ಯಾಷನಲ್ ಇಸ್ಕಾನ್ ಸಂಸ್ಥೆ ಹಿಂಸಾಚಾರ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅಲ್ಪಸಂಖ್ಯಾತರ ಭದ್ರತೆಗೆ ವ್ಯವಸ್ಥೆ ಕಲ್ಪಿಸಿ ಮತ್ತು ಅಲ್ಲಿ ಶಾಂತಿ ಪುನಃಸ್ಥಾಪಿಸಿ ಎಂದು ಬಾಂಗ್ಲಾ ಸರ್ಕಾರಕ್ಕೆ ಮನವಿ ಮಾಡಿದೆ.
ನಮ್ಮದೇ ಇಸ್ಕಾನ್ ದೇವಸ್ಥಾನಗಳು ಸೇರಿದಂತೆ ಹಿಂದೂ ಸಮುದಾಯದ ವಿರುದ್ಧ ಇತ್ತೀಚೆಗೆ ನಡೆಸುತ್ತಿರುವ ಹಿಂಸಾತ್ಮಕ ಘಟನೆಗಳ ಸರಣಿಯಿಂದ ಇಸ್ಕಾನ್ನ ಭಕ್ತರು ತೀವ್ರ ಆಘಾತ ಮತ್ತು ದುಃಖಿತರಾಗಿದ್ದಾರೆ ಎಂದು ಮಾಯಾಪುರದ ಇಸ್ಕಾನ್ ಸಹನಿರ್ದೇಶಕ ವ್ರಜಾವಿಲಾಸ ದಾಸ್ ಘಟನೆ ಕುರಿತು ಹೊರಡಿಸಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ಆಸ್ಟ್ರೇಲಿಯಾ, ಫ್ರಾನ್ಸ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಅಮೆರಿಕ, ರಷ್ಯಾ, ಚೀನಾ, ಇಟಲಿ, ದಕ್ಷಿಣ ಕೊರಿಯಾ ಮತ್ತು ಜಪಾನ್ ಸೇರಿದಂತೆ 82 ದೇಶಗಳ 7,000ಕ್ಕೂ ಹೆಚ್ಚು ಇಸ್ಕಾನ್ ಭಕ್ತರು ಜಾಗತಿಕ ಪ್ರಧಾನ ಕಚೇರಿಯಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ವಿರುದ್ಧ ಪ್ರತಿಭಟಿಸಿದ್ದಾರೆ ಎಂದಿದ್ದಾರೆ.
ಅಕ್ಟೋಬರ್ 13ರಿಂದ 15 ರವರೆಗೆ ಹಲವು ದೇವಾಲಯಗಳ ಮೇಲೆ ದಾಳಿ ನಡೆಸಲಾಗಿದೆ. ಆಸ್ತಿ-ಪಾಸ್ತಿಗಳಿಗೆ ಬೆಂಕಿ ಹಚ್ಚಿ ಹಾನಿ ಮಾಡಲಾಗಿದೆ. ಜೊತೆಗೆ ನಾವು ಇಬ್ಬರು ಭಕ್ತರನ್ನು ಕಳೆದುಕೊಂಡಿದ್ದೇವೆ. ಪ್ರಧಾನಿ ಶೇಖ್ ಹಸೀನಾ ಅವರು ಹಿಂದೂ ಸಮುದಾಯವನ್ನು ಬೆಂಬಲಿಸಿ ನೀಡಿದ್ದ ಇತ್ತೀಚಿನ ಹೇಳಿಕೆಗಳಿಗೆ ಕೃತಜ್ಞತೆ ವ್ಯಕ್ತಪಡಿಸುತ್ತೇವೆ ಎಂದು ದಾಸ್ ತಿಳಿಸಿದರು.
ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಮುಂದುವರಿದ ದಾಳಿ.. 66 ಮನೆ ಧ್ವಂಸ, 20 ಮನೆಗಳಿಗೆ ಬೆಂಕಿ