ಬತಿಂಡಾ(ಪಂಜಾಬ್): ವ್ಯಕ್ತಿಯ ಎದೆಗೆ ಚುಚ್ಚಿದ್ದ ಆರು ಅಡಿ ಉದ್ದದ ಕಬ್ಬಿಣದ ಸರಳನ್ನು ಹೊರತೆಗೆದು ಆತನ ಜೀವ ಉಳಿಸುವಲ್ಲಿ ಶಸ್ತ್ರಚಿಕಿತ್ಸಕ ಸೇರಿದಂತೆ 15 ಮಂದಿ ವೈದ್ಯರು ಯಶಸ್ವಿಯಾಗಿದ್ದಾರೆ. ಪಂಜಾಬ್ನ ಬತಿಂಡಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಟೆಂಪೋದಲ್ಲಿ ಕುಳಿತು ಬರುವ ವೇಳೆ ಅಪಘಾತ ಸಂಭವಿಸಿ ಹರ್ದೀಪ್ ಸಿಂಗ್ ಎಂಬವರ ಎದೆಗೆ ಕಬ್ಬಿಣದ ದೊಡ್ಡ ಸರಳು ಚುಚ್ಚಿ ಬೆನ್ನಿನಿಂದ ಹೊರಬಂದಿತ್ತು. ಈತನನ್ನು ಟೆಂಪೋದಿಂದ ಹೊರತೆಗೆದು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಒಂದೆಡೆ ತೀವ್ರ ರಕ್ತಸ್ರಾವವಾಗುತ್ತಿದ್ದು, ನೋವು ಸಹಿಸಿಕೊಂಡು ಗಟ್ಟಿಯಾಗಿ ಕುಳಿತ ಹರ್ದೀಪ್ ಸಿಂಗ್ ಧೈರ್ಯ ಹಾಗೂ ವೈದ್ಯರ ಶ್ರಮ ಮೆಚ್ಚಲೇ ಬೇಕಿದೆ.
ಮೊದಲು ಕಟ್ಟರ್ನಿಂದ ದೇಹದಿಂದ ಹೊರಬಂದಿದ್ದ ಸರಳು ಕತ್ತರಿಸಲಾಗಿದೆ. ಬಳಿಕ ದೇಹದೊಳಗಿದ್ದ ತುಂಡನ್ನು ಹೊರ ತೆಗೆಯಲಾಗಿದೆ. ಆನಂತರ ಹಾನಿಗೊಳಗಾದ ಆತನ ದೇಹದ ಭಾಗಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸತತ 5 ಗಂಟೆಗಳ ವೈದ್ಯರ ಕಠಿಣ ಪರಿಶ್ರಮದಿಂದಾಗಿ ಈಗ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.