ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ನುಡಿ ಎಂಬ ಮಾತಿದೆ. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎಂಬ ಮಾತೂ ಇದೆ. ಅದರಂತೆ ವಿದ್ಯೆ ಕಲಿತ ತಾಯಿಯೊಬ್ಬಳು ಕುಟುಂಬ ಮಾತ್ರವಲ್ಲ, ಸಮಾಜದ ಅಭಿವೃದ್ಧಿಗೆ ಆಕೆಯ ಕೊಡುಗೆ ಅಪಾರ. ಮಹಿಳೆ ಮನಸು ಮಾಡಿದರೆ, ಯಾವುದು ಕಷ್ಟವಲ್ಲ. ಸಾಧಿಸುವ ಛಲ ಆಕೆಯಲ್ಲಿ ಇರಬೇಕು. ಅಂಹ ಸ್ಫೂರ್ತಿದಾಯಕ ಹೆಣ್ಣುಮಕ್ಕಳ ಕಥೆ ಇಲ್ಲಿದೆ. ಸಿವಿಲ್ ಪರೀಕ್ಷೆ ಪಾಸಾಗಿ ಸರ್ದಾರ್ ವಲ್ಲಭಾಯ್ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಉತ್ತಮ ಪ್ರದರ್ಶನ ತೋರಿದ ಮೂವರು ಮಹಿಳಾ ಐಪಿಎಸ್ ಅಧಿಕಾರಿಗಳನ್ನು 'ಈಟಿವಿ ಭಾರತ' ಸಂದರ್ಶನ ನಡೆಸಿದೆ.
ಯಾಕೆ ಕಷ್ಟ ಪಡಬೇಕು ಎಂದು ಚಿಂತಿಸಿದ್ದೆ- ದೀಕ್ಷಾ.. ನಮ್ಮದು ರಾಜಸ್ಥಾನದ ಕೇತ್ರಿ ಊರು. ತಂದೆ ಭೂಪೇಶ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ತಾಯಿ ಸುನೀತಾ ಶಿಕ್ಷಕಿಯಾಗಿದ್ದರು. ನಾನು ದೆಹಲಿಯ ಐಐಟಿಯಲ್ಲಿ ಟೆಕ್ಸ್ಟೈಲ್ಸ್ ಟೆಕ್ನಾಲೋಜಿಯಲ್ಲಿ ಬಿಟೆಕ್ ಪದವಿ ಮಾಡುತ್ತಿದ್ದಾಗ, ಸಿವಿಲ್ ಪರೀಕ್ಷೆ ಬರೆಯಬೇಕು ಎಂದು ನಿರ್ಧರಿಸಿದೆ. ನಾನು ದಿನದಲ್ಲಿ 13 ಗಂಟೆ ಓದುತ್ತಿದ್ದೆ.
ಐಪಿಎಸ್ ಆಗಿ ಆಯ್ಕೆಗೊಂಡ ಬಳಿಕ ಕಠಿಣ ತರಬೇತಿ ಶುರುವಾಯಿತು. ಈಜು, ಓಟ, ಫೈರಿಂಗ್ ಮತ್ತು ಡ್ರಿಲ್ಲಿಂಗ್ ತರಬೇತಿ ಆಯಿತು. ಅಷ್ಟೇ ಅಲ್ಲದೇ ಮಧ್ಯರಾತ್ರಿಯಲ್ಲಿ 9 ಕೆಜಿ ಒತ್ತು 40 ಕಿ. ಮೀ ಓಡಬೇಕಿತ್ತು. ಆಗ ನಾನು ಯಾಕೆ ಇಷ್ಟೊಂದು ಕಷ್ಟ ಪಡಬೇಕು ಎಂದು ಕೊಂಡೆ. ಇದಾದ ಮರುಕ್ಷಣವೇ ಈ ಕಠಿಣ ತರಬೇತಿಗಳಿಂದಲೇ ನಾನು ಸಾಮಾನ್ಯ ಮಹಿಳೆಯಿಂದ ಪವರ್ಫುಲ್ ಪೊಲೀಸ್ ಅಧಿಕಾರಿಯಾಗುವುದು ಎಂದು ಆಲೋಚಿಸಿದೆ. ಈ ತರಬೇತಿಯಲ್ಲಿ ನಾನು ಆತ್ಮ ವಿಶ್ವಾಸ, ಆತ್ಮ ನಿಯಂತ್ರಣ ಮತ್ತು ಭಾವನೆಗಳ ನಿಯಂತ್ರವನ್ನು ಕಲಿತಿದ್ದೇನೆ. ಕತ್ತಿ ವರಸೆ, ಒಳಾಂಗಣ ಮತ್ತು ಹೊರಾಂಗಣ ತರಬೇತಿಯಲ್ಲಿ ನಾನು ಮೊದಲ ಸ್ಥಾನ ಪಡೆದೆ.
ಉತ್ತಮ ಔಟ್ಡೋರ್ ಪ್ರೋಬೇಷನರ್ ಮತ್ತು ಪ್ಲಾಟೋನ್ ಕಮಾಂಡರ್ ಆದ ಬಳಿಕ ತರಬೇತಿ ವೇಳೆ ಪಟ್ಟ ಕಷ್ಟ ಎಲ್ಲವೂ ಮರೆತು ಹೋಯಿತು. ಈ ಅಕಾಡೆಮಿಯಲ್ಲಿ ಈ ಸ್ಥಾನ ಪಡೆಯುತ್ತಿರುವ ಎರಡನೇ ಮಹಿಳೆ ನಾನು ಎಂಬುದಕ್ಕೆ ನನಗೆ ಹೆಮ್ಮೆ ಇದೆ ಎಂದ ದೀಕ್ಷಾ, ಎಲ್ಲಾ ರೀತಿಯ ಅನುಭವಗಳನ್ನು ತಾವು ಈ ತರಬೇತಿಯಲ್ಲಿ ಪಡೆದು ಬಲಿಷ್ಠ ಮಹಿಳೆಯಾಗಿರುವುದಾಗಿ ಸಂತಸ ವ್ಯಕ್ತಪಡಿಸಿದರು. ನಾವು ಅಂದುಕೊಂಡಿದ್ದನ್ನು ಸಾಧಿಸಬೇಕು. ಇದಕ್ಕೆ ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು ಎನ್ನುತ್ತಾರೆ.
ಪ್ರಯತ್ನ ನಿಲ್ಲಿಸಬೇಡಿ- ಸೆಶಾದ್ರಿನಿ ರೆಡ್ಡಿ.. ನಮ್ಮದು ಹೈದರಾಬಾದ್, ತಂದೆ ಸುಧಾಕರ್ ರೆಡ್ಡಿ ಸಿವಿಲ್ ಕಾಂಟ್ರಾಕ್ಟರ್. ಆದರೆ, ತಾಯಿ ಕವಿತಾ ಗೃಹಿಣಿ. ಸಿವಿಲ್ ಸರ್ವಿಸ್ಗೆ ಸೇರಬೇಕು ಎಂಬ ಕನಸಿಗೆ ನನ್ನ ತಂದೆ ಕೆಲಸವೇ ಸ್ಫೂರ್ತಿ. ಹೈದರಾಬಾದ್ ಐಐಟಿಯಿಂದ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ನಾನು ಸಿವಿಲ್ಸ್ ಪರೀಕ್ಷೆ ಎದುರಿಸಿದೆ. ಮೊದಲ ಪ್ರಯತ್ನದಲ್ಲಿ ನಿರಾಸೆಗೊಂಡೆ. ಆದರೆ, ಪೋಷಕರ ಪ್ರೋತ್ಸಾಹದಿಂದ ಎರಡನೇ ಬಾರಿ ಯಶಸ್ವಿಯಾದೆ. ಐಎಎಸ್ ಆಗಬೇಕು ಎಂದುಕೊಂಡಿದ್ದ ನನಗೆ ಐಪಿಎಸ್ ಸಿಕ್ಕಿತು. ಎರಡು ಸಾರ್ವಜನಿಕ ಸೇವೆಯ ಗುರಿ ಒಂದೇ. ಈ ಹಿನ್ನೆಲೆ ಖುಷಿಯಿಂದ ತರಬೇತಿ ಆರಂಭಿಸಿದೆ.
ಜೀವನದಲ್ಲಿ ನಾನು ಭೇಟಿಯಾದ ಪ್ರತಿಯೊಬ್ಬರು ನನಗೆ ಸ್ಫೂರ್ತಿದಾಯಕರು. ನನ್ನ ಪೋಷಕರು ಮತ್ತು ಸ್ನೇಹಿತರು ನನಗೆ ಗೊತ್ತಿಲ್ಲದ ಅನೇಕ ವಿಷಯಗಳನ್ನು ನನಗೆ ಕಲಿಸಿದ್ದಾರೆ. ನಾವು ಮಹಿಳೆಯರು ಎಂಬ ಕಾರಣಕ್ಕೆ ಹಿಂದೆ ಸರಿಯಬಾರದು. ನೀವು ಅಂದುಕೊಂಡ ಗುರಿ ಸಾಧನೆ ಮಾಡುವವರೆಗೂ ನಿಮ್ಮ ಪ್ರಯತ್ನ ಬಿಡಬಾರದು ಎನ್ನುವ ಸೆಶಾದ್ರಿನಿ ರೆಡ್ಡಿ, ಈಗ ಸೈಬರ್ ಕ್ರೈಂ ಹೆಚ್ಚುತ್ತಿದ್ದು, ಈ ಬಗ್ಗೆ ಹೆಚ್ಚಿನ ಗಮನವಹಿಸಿ ಕಾರ್ಯ ನಿರ್ವಹಿಸುವುದಾಗಿ ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಸಿವಿಲ್ ಪರೀಕ್ಷೆಗಾಗಿ ಐಟಿ ಉದ್ಯೋಗ ತೊರೆದೆ- ನಿತ್ಯಾ ರಾಧಾಕೃಷ್ಣನ್: ನಾಲ್ಕು ವರ್ಷ ಐಟಿ ಉದ್ಯೋಗ ಮಾಡಿದೆ. ಜೊತೆಗೆ ಎರಡೂವರೆ ವರ್ಷ ಅಕೌಂಟ್ ಕಾರ್ಯ ನಿರ್ವಹಿಸಿದೆ. ಮದುವೆಯಾಗಿ ನನಗೆ ಒಬ್ಬ ಮಗ ಹುಟ್ಟಿದ. ಇದಾದ ಬಳಿಕ ನನಗೆ ಐಪಿಎಸ್ ಆಗಬೇಕು ಎಂಬ ಛಲ ಮೂಡಿತು. ಇದಕ್ಕೆ ಕಾರಣ ನನ್ನ ತಾಯಿ. ನಾನು ಒಂಭತ್ತನೇ ತರಗತಿಯಲ್ಲಿದ್ದಾಗ ನನ್ನ ತಾಯಿ ಟೀಚರ್ ಆಗಬೇಕು ಎಂದು ಕಷ್ಟಪಟ್ಟು ಓದಿದರು. ಆಕೆ ನನಗೆ ಸ್ಫೂರ್ತಿಯಾದಳು.
ನಮ್ಮದು ತಮಿಳುನಾಡಿನ ತಲೈವಸಲ್ ಊರು. ತಂದೆ ರಾಧಾಕೃಷ್ಣನ್ ಕೃಷಿಕರು. ಮದುವೆಯಾಗಿ ಏಳು ವರ್ಷದ ಬಳಿಕ ನನ್ನ ಮಗ ಹುಟ್ಟಿದ ನಂತರ ನಾನು ಸಿವಿಲ್ ಪರೀಕ್ಷೆ ಬರೆದು ಪಾಸ್ ಆದೆ. ನನಗೆ ಕ್ರೀಡೆಯಲ್ಲೂ ಅಪಾರ ಉತ್ಸಾಹ ಇತ್ತು. ಇದೇ ಕಾರಣಕ್ಕೆ ತರಬೇತಿಯಲ್ಲಿ ಯೋಗ, ಫೈರಿಂಗ್, ಕುದುರೆ ಸವಾರಿ ಮತ್ತು ಈಜನ್ನು ಎಂಜಾಯ್ ಮಾಡಿದೆ. ಇದೇ ಕಾರಣಕ್ಕೆ ನನಗೆ ಕಷ್ಟ ಗೊತ್ತಾಗಲಿಲ್ಲ ಎನ್ನುತ್ತಾರೆ. ಇನ್ನು ತಮ್ಮ ತರಬೇತಿಯಲ್ಲಿ ಮಧ್ಯರಾತ್ರಿ 9 ಕೆಜಿ ಭಾರ ಹೊತ್ತು 40 ಕಿಲೋ ಮೀಟರ್ ಸಾಗಿದ್ದು, ಎರಡು ಗಂಟೆಯ 21 ಕಿ.ಮೀ. ಮ್ಯಾರಾಥಾನ್ ಮರೆಯಲಾಗದ ಅನುಭವ. ಔಟ್ಡೋರ್ ಟ್ರೈನಿಂಗ್ನಲ್ಲಿ ನನಗೆ ಬೆಸ್ಟ್ ಲೇಡಿ ಪ್ರೊಬೇಷನರಿ ಟ್ರೋಫಿಯನ್ನು ಪಡೆದೆ ಎಂದು ಖುಷಿ ಹಂಚಿಕೊಂಡಿದ್ದಾರೆ ನಿತ್ಯಾ.
ತಂದೆ ಪೊಲೀಸ್ ಆಗಿರುವಾಗ ನೀನು ಯಾಕೆ ಆಗಬಾರದು ಎಂದು ಎಂಬ ಮಗನ ಪ್ರಶ್ನೆಗೆ ನನಗೆ ಅಚ್ಚರಿ ಆಯಿತು. ಆಗ ಮಗನಿಗೆ, ಅಂದುಕೊಂಡ ಗುರಿ ಸಾಧನೆಗೆ, ಯಾವುದೇ ಲಿಂಗ ಬೇಧವಿಲ್ಲ. ನಿನಗೆ ಬೇಕಾದನ್ನು ನೀನು ಸಾಧಿಸಬಹುದು ಎಂದು ತಿಳಿ ಹೇಳಿದೆ. ಇದೇ ಮಾತನ್ನು ಈಗಿನ ಪೀಳಿಗೆಗೂ ಹೇಳುತ್ತೇನೆ ಎನ್ನುತ್ತಾರೆ ನಿತ್ಯಾ.