ಜೈಪುರ(ರಾಜಸ್ಥಾನ): ಐಪಿಎಸ್ ಅಧಿಕಾರಿಯೊಬ್ಬರಿಗೆ ಸುಳ್ಳು ಅತ್ಯಾಚಾರದ ಕೇಸ್ ಹಾಕುವುದಾಗಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವ ಪ್ರಕರಣ ರಾಜಧಾನಿ ಜೈಪುರದಲ್ಲಿ ಬೆಳಕಿಗೆ ಬಂದಿದೆ. ಅಲ್ಲದೇ ಪತ್ನಿಗೆ ವಿಚ್ಛೇದನ ನೀಡಿ ತನ್ನನ್ನು ಮದುವೆಯಾಗುವಂತೆ ಐಪಿಎಸ್ ಅಧಿಕಾರಿ ಮೇಲೆ ಮಹಿಳಾ ವೈದ್ಯೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಈ ಕುರಿತು ಜಯಪುರದ ಜವಾಹರ್ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಎಸ್ ಅಧಿಕಾರಿ ನೀಡಿರುವ ದೂರಿನಲ್ಲಿ ಏನಿದೆ?: ಐಪಿಎಸ್ ಅಧಿಕಾರಿ ರಾಜೇಶ್ ಕುಮಾರ್ ಮೀನಾ ಅವರು ಗುರುವಾರ ಮಹಿಳಾ ವೈದ್ಯೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಜವಾಹರ್ ವೃತ್ತದ ಠಾಣಾಧಿಕಾರಿ ಅರವಿಂದ್ ಕುಮಾರ್ ಚರಣ್ ತಿಳಿಸಿದ್ದಾರೆ. 2020ರ ಕೋವಿಡ್ ಸಮಯದಲ್ಲಿ ರಾಜಸ್ಥಾನ ಆಡಳಿತ ಸೇವೆ (ಆರ್‌ಎಎಸ್) ಪ್ರೊಬೇಷನರ್ ಅಧಿಕಾರಿಯಾಗಿ ಡುಂಗರ್‌ಪುರದಲ್ಲಿ ರಾಜೇಶ್ ಅವರನ್ನು ನಿಯೋಜಿಸಲಾಗಿತ್ತು. ಆಗ ಗುತ್ತಿಗೆಯಲ್ಲಿ ಕೆಲಸ ಮಾಡುವ ಮಹಿಳಾ ವೈದ್ಯೆಯನ್ನು ಭೇಟಿಯಾಗಿದ್ದಾಗಿ ರಾಜೇಶ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆ ವೇಳೆ ಇಬ್ಬರು ಆರ್‌ಎಎಸ್ ತಯಾರಿ ಬಗ್ಗೆ ಮಾತನಾಡಿದ್ದರು. ಬಳಿಕ ಇಬ್ಬರೂ ಸ್ನೇಹಿತರಾಗಿ ಮಾತನಾಡಲು ಶುರುವಿಟ್ಟುಕೊಂಡಿದ್ದರು.
ಮದುವೆಯಾಗುವಂತೆ ಒತ್ತಾಯ: ಈಗಾಗಲೇ ಮದುವೆಯಾಗಿರುವ ಮಹಿಳೆ ಅಡುಗೆ ಮಾಡಿ ತಂದು ಕೊಡುತ್ತಿದ್ದರು ಎಂದು ರಾಜೇಶ್ ದೂರಿನಲ್ಲಿ ತಿಳಿಸಿದ್ದಾರೆ. ಒಂದು ಬಾರಿ ಮಹಿಳೆಯಿಂದ 3 ಲಕ್ಷ ರೂಪಾಯಿ ಸಾಲ ಪಡೆದು ವಾಪಸ್ ನೀಡಿದ್ದಾಗಿಯೂ ದೂರುದಾರರು ಒಪ್ಪಿಕೊಂಡಿದ್ದಾರೆ. ಬಳಿಕ ರಾಜೇಶ್ ಅವರನ್ನು ಮಹಿಳೆ ಆಗಾಗ ಔಷಧಿಗಳನ್ನು ಸೂಚಿಸುವ ನೆಪದಲ್ಲಿ ಅವರನ್ನು ಭೇಟಿ ಮಾಡುತ್ತಿದ್ದರು.
ಪ್ರಾಸಂಗಿಕವಾಗಿ, 2021ರಲ್ಲಿ, ರಾಜೇಶ್ ಐಪಿಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. ಬಳಿಕ ಮೇ 2023ರಲ್ಲಿ ವಿವಾಹಗಿದ್ದರು. ರಾಜೇಶ್ ಅವರು ಮದುವೆಯ ನಂತರ ಮಹಿಳೆಯೊಂದಿಗೆ ಮಾತನಾಡುವುದನ್ನು ನಿಲ್ಲಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ರಾಜೇಶ್ ಮದುವೆ ವಿಚಾರ ತಿಳಿದ ನಂತರ ಆರೋಪಿ ಮಹಿಳಾ ವೈದ್ಯೆ ಪತ್ನಿಗೆ ವಿಚ್ಛೇದನ ನೀಡಿ ಮದುವೆಯಾಗುವಂತೆ ಒತ್ತಡ ಹೇರಲು ಆರಂಭಿಸಿದ್ದರು ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ.
ರಾಜೇಶ್ನನ್ನು ಮದುವೆಯಾಗಲು ತಾನು ಈಗಾಗಲೇ ಪತಿಗೆ ವಿಚ್ಛೇದನ ನೀಡಿದ್ದೇನೆ ಎಂದು ಮಹಿಳೆ ದೂರುದಾರರಿಗೆ ತಿಳಿಸಿದ್ದಾರೆ. ಅವರು ಮದುವೆಗೆ ನಿರಾಕರಿಸಿದಾಗ 50 ಲಕ್ಷ ರೂಪಾಯಿಗೆ ಬೇಡಿಕೆಯಿಟಿದ್ದಾರೆ. ಅಲ್ಲದೇ ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಕಳೆದ ನಾಲ್ಕು ತಿಂಗಳಿನಿಂದ ಮಹಿಳೆ ಹಲವು ಬಾರಿ ಕರೆ ಮಾಡಿ ಬ್ಲಾಕ್ ಮೇಲ್ ಮಾಡಿದ್ದರು ಎಂದು ರಾಜೇಶ್ ದೂರಿನಲ್ಲಿ ಆರೋಪಿಸಿದ್ದಾರೆ. ಐಪಿಎಸ್ ಅಧಿಕಾರಿಯ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಲಾಗಿದೆ. ಪ್ರಕರಣವನ್ನು ಎಸ್‌ಐ ಮದ್ರೂಪ್ ಅವರಿಗೆ ವಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣ ದಾಖಲು: ಮಹಿಳಾ ವೈದ್ಯೆ ವಿರುದ್ಧ ಐಪಿಎಸ್ ಅಧಿಕಾರಿ ರಾಜೇಶ್ ಕುಮಾರ್ ಮೀನಾ ಬ್ಲ್ಯಾಕ್ ಮೇಲ್ ಪ್ರಕರಣ ದಾಖಲಿಸುತ್ತಿದ್ದಂತೆ ಮದುವೆಯ ನೆಪದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ಐಪಿಎಸ್ ರಾಜೇಶ್ ಕುಮಾರ್ ಮೀನಾ ವಿರುದ್ಧ ಆಕೆ ಪ್ರಕರಣ ದಾಖಲಿಸಿದ್ದಾರೆ.
ಡುಂಗರ್‌ಪುರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಮಹಿಳಾ ವೈದ್ಯೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ರಾಜೇಶ್ ಮೀನಾ ಆರ್‌ಎಎಸ್ ಅಧಿಕಾರಿಯಾಗಿದ್ದಾಗ ಅವರ ಜೊತೆ ಸ್ನೇಹ ಬೆಳೆಸಿ ಮದುವೆ ನೆಪದಲ್ಲಿ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಿದ್ದಾರೆ. ಅಲ್ಲದೇ ಅವರು ಐಪಿಎಸ್ ಆದ ನಂತರ ಮದುವೆಯಾಗಲು ನಿರಾಕರಿಸಿದರು. ಜತೆಗೆ ಲಕ್ಷಗಟ್ಟಲೆ ಹಣ ಸುಲಿಗೆ ಮಾಡಿದ್ದಾರೆ ಎಂದು ಮಹಿಳಾ ವೈದ್ಯೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: Bengaluru crime: ವೃದ್ಧರನ್ನೇ ಟಾರ್ಗೆಟ್ ಮಾಡಿ ಹನಿಟ್ರ್ಯಾಪ್.. ಬೆಂಗಳೂರಲ್ಲಿ ಕಿಲಾಡಿ ಮಹಿಳೆಯರ ಬಂಧನ