ನವದೆಹಲಿ: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಗಳಿಗೆ ಕೋವಿಡ್ ವಾರಿಯರ್ಗಳನ್ನು ಆಹ್ವಾನಿಸಬೇಕೆಂದು ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. ವೈದ್ಯರು, ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಕೆಲಸಗಾರರು ಹಾಗೂ ಕೋವಿಡ್ನಿಂದ ಚೇತರಿಕೆ ಕಂಡವರನ್ನು ರಾಜ್ಯ, ಜಿಲ್ಲಾ, ಬ್ಲಾಕ್ ಮತ್ತು ಪಂಚಾಯತ್ ಮಟ್ಟದ ಸ್ವಾತಂತ್ರ್ಯ ದಿನದ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ಹೇಳಿದೆ.
ಇದರ ಜೊತೆಗೆ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಸಭೆಗಳನ್ನು ನಿಯಂತ್ರಿಸಿ, ಅವುಗಳ ಮೇಲೆ ನಿರ್ಬಂಧ ಹೇರಬೇಕೆಂದು ಕೇಂದ್ರ ಗೃಹ ಸಚಿವಾಲಯವು ಹೇಳಿತ್ತು. ಇದರ ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗರಿಷ್ಠ ಮಟ್ಟದ ತಂತ್ರಜ್ಞಾನ ಬಳಸಿಕೊಳ್ಳಬೇಕೆಂದು ಸೂಚನೆ ನೀಡಿತ್ತು.
ಕೇಂದ್ರ ಸರ್ಕಾರವು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೋವಿಡ್ ವಾರಿಯರ್ಸ್ ಅನ್ನು ಗೌರವಿಸಲು ಸೂಚಿಸಿದೆ. ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ದೇಶಭಕ್ತಿಯ ಅಥವಾ ರಾಷ್ಟ್ರೀಯ ಏಕೀಕರಣದ ಸಂದೇಶಗಳನ್ನು ಅಥವಾ ಹಾಡುಗಳನ್ನು ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವುದು ಅಥವಾ ಪ್ರಮುಖ ಸಾರ್ವಜನಿಕ ಕಟ್ಟಡಗಳನ್ನು ಬೆಳಗಿಸುವುದು ಮುಂತಾದ ಕೆಲಸಗಳನ್ನು ಮಾಡಬಹುದು ಎಂದು ಉಲ್ಲೇಖಿಸಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸರಿಯಾದ ನೈರ್ಮಲ್ಯೀಕರಣ, ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ಗೃಹ ಸಚಿವಾಲಯ ಹೇಳಿದೆ.
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್ ಕುಸ್ತಿ: ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟ ರವಿ ದಹಿಯಾ