ನವದೆಹಲಿ: ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಂದರ್ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಫರೀದ್ಕೋಟ್ನಲ್ಲಿ ದಾಖಲಾದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂಸೆವಾಲಾ ಹತ್ಯೆಗೆ 10 ದಿನಗಳ ಮೊದಲು ಗೋಲ್ಡಿ ಬ್ರಾರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ್ದಾರೆ.
ಗೋಲ್ಡಿ ಬ್ರಾರ್ ಕೆನಡಾದಲ್ಲಿ ವಾಸವಾಗಿದ್ದು, ಸಿಧು ಹತ್ಯೆಯ ಹೊಣೆ ಹೊತ್ತುಕೊಂಡಿರುವುದರಿಂದ ಪ್ರಕರಣದ ತನಿಖೆಗೆ ಅನುಕೂಲವಾಗುವಂತೆ ಸಿಬಿಐ ಇಂಟರ್ಪೋಲ್ಗೆ ನೆರವು ಕೇಳಿತ್ತು. ಹಳೆಯ ಎರಡು ಪ್ರಕರಣಗಳ ಜತೆಗೆ ಸಿಧು ಹತ್ಯೆಯಲ್ಲಿ ಗೋಲ್ಡಿ ಬ್ರಾರ್ ಕೈವಾಡ ಇರುವುದರಿಂದ ಪಂಜಾಬ್ ಪೊಲೀಸ್ ಮತ್ತು ಸಿಬಿಐ ಇಂಟರ್ಪೋಲ್ ಮೊರೆ ಹೋಗಿದೆ.
ಇದನ್ನೂ ಓದಿ: ಗಾಯಕ ಮೂಸೆವಾಲಾ ಹತ್ಯೆ ಪ್ರಕರಣ: ದೇಶಬಿಟ್ಟ ಪ್ರಮುಖ ಸಂಚುಕೋರ, ಮತ್ತೊಬ್ಬ ಕಾಣೆ
ಗೋಲ್ಡಿ ಬ್ರಾರ್ ವಿರುದ್ಧದ ಪ್ರಕರಣಗಳನ್ನ ನವೆಂಬರ್ 2020 ಮತ್ತು ಫೆಬ್ರವರಿ 2021ರಲ್ಲಿ ದಾಖಲಿಸಲಾಗಿತ್ತು. ಇದರಲ್ಲಿ ಕೊಲೆ, ಕೊಲೆ ಯತ್ನ, ಶಸ್ತ್ರಾಸ್ತ್ರ ಕಾಯ್ದೆಯ ಆರೋಪಗಳಿವೆ. ಮೇ. 29ರಂದು ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ 28 ವರ್ಷದ ಗಾಯಕ ಸಿಧು ಮೂಸೆವಾಲಾ ಅವರನ್ನ ಕೆಲವು ಅಪರಿಚಿತ ದಾಳಿಕೋರರು ಗುಂಡಿಕ್ಕಿ ಕೊಂದಿದ್ದರು. ಗೋಲ್ಡಿ ಬ್ರಾರ್ ಮೂಸೆವಾಲಾ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾರೆ.