ತಮ್ಮ ಆರೋಗ್ಯ ಲೆಕ್ಕಿಸದೇ ಹಗಲಿರುಳು ದಣಿವರಿಯದೆ ರೋಗಿಗಳ ಸೇವೆ ಮಾಡುವ ದಾದಿಯರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ರೋಗಿಗಳ ಚಿಕಿತ್ಸೆಯ ವಿಚಾರದಲ್ಲಿ ವೈದ್ಯರಿಗೆ ಸಿಗುವಷ್ಟು ಮನ್ನಣೆ ನರ್ಸ್ಗಳಿಗೆ ಸಿಗುವುದಿಲ್ಲ. ಇದು ಸಮರ್ಥನೀಯವಲ್ಲ. ಏಕೆಂದರೆ ವೈದ್ಯರು ರೋಗಿಗೆ ಚಿಕಿತ್ಸೆ ನೀಡುತ್ತಾರೆ ನಿಜ. ನರ್ಸ್ಗಳು ರೋಗಿಗೆ ವಾರಪೂರ್ತಿ ದಿನದ 24 ಗಂಟೆಗಳ ಕಾಲವೂ ಜೊತೆಗಿದ್ದು, ಸೇವೆ ಮಾಡುತ್ತಾರೆ. ಆದ್ದರಿಂದ, ಅವರನ್ನು ಗೌರವಿಸಲು ಇದೊಂದು ವಿಶೇಷವಾದ ಸುದಿನ.
ಗ್ಲೋಬಲ್ ನರ್ಸಿಂಗ್ ಪ್ರಶಸ್ತಿ: ಲಂಡನ್ನಲ್ಲಿ ಆಯೋಜಿಸಲಾಗಿರುವ ಪ್ರತಿಷ್ಟಿತ 'ಗ್ಲೋಬಲ್ ನರ್ಸಿಂಗ್ ಪ್ರಶಸ್ತಿ'ಯ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಇಬ್ಬರು ಭಾರತೀಯ ನರ್ಸ್ಗಳು ಭಾಗವಹಿಸಲಿದ್ದಾರೆ. ಅಂಡಮಾನ್ ನಿಕೋಬಾರ್ನಲ್ಲಿ ಬುಡಕಟ್ಟು ಜನರ ಸೇವೆಯಲ್ಲಿ ನಿರತರಾಗಿರುವ ಶಾಂತಿ ತೆರೇಸಾ ಲಾಕ್ರಾ ಮತ್ತು ಕೇರಳದ ಜಿನ್ಸಿ ಜೆರ್ರಿ ಪ್ರಶಸ್ತಿ ರೇಸ್‌ನಲ್ಲಿದ್ದಾರೆ.
ದುಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಖಾಸಗಿ ಆರೋಗ್ಯ ಸೇವಾ ಸಂಸ್ಥೆ ಅಸ್ತೇರ್ ಡಿ.ಎಂ ಹೆಲ್ತ್ಕೇರ್, ವಿಶ್ವದಾದ್ಯಂತ ಸಾಧಕ ಶುಶ್ರೂಷಕಿಯರನ್ನು ಗುರುತಿಸಿ ಈ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿ ಮೊತ್ತ 2.5 ಲಕ್ಷ ಡಾಲರ್ ಅಂದರೆ ಭಾರತದ ರೂಪಾಯಿಗಳಲ್ಲಿ 2.05 ಕೋಟಿ ರೂ ಆಗಿದೆ. ಕಾರ್ಯಕ್ರಮವು ಅಂತಾರಾಷ್ಟ್ರೀಯ ನರ್ಸ್‌ಗಳ ದಿನವಾದ ಇಂದು ಲಂಡನ್ನಲ್ಲಿ ನಡೆಯಲಿದೆ.
ಮೇ 12 ಯಾಕೆ?: ಈ ದಿನವನ್ನೇ ಆಯ್ದುಕೊಳ್ಳಲು ಕಾರಣವಿದೆ. ಈ ಸಂದರ್ಭದಲ್ಲಿ ನಾವು ಆಧುನಿಕ ಶುಶ್ರೂಷೆಯ ಸ್ಥಾಪಕರೆಂದೇ ಕರೆಯಲ್ಪಡುವ ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ಸ್ಮರಿಸಲೇಬೇಕು. ಇವರ ಜನ್ಮದಿನ ಮೇ 12. ಇವರು ಕ್ರಿಮಿಯಾ ಯುದ್ಧದ ಸಮಯದಲ್ಲಿ ನರ್ಸ್‌ಗಳ ವ್ಯವಸ್ಥಾಪಕರಾಗಿ, ತರಬೇತುದಾರಳಾಗಿ, ಗಾಯಾಳು ಬ್ರಿಟಿಷ್ ಸೈನಿಕರಿಗೆ ದಾದಿಯಾಗಿ ನೀಡಿದ ಕೊಡುಗೆ ಅಪಾರ. ಯಾವುದೇ ಫಲಾಪೇಕ್ಷೆ ಇಲ್ಲದ ಸೇವೆಯಿಂದ ನೈಟಿಂಗೇಲ್ ಹೆಚ್ಚು ಖ್ಯಾತಿ ಗಳಿಸಿದವರು. ಹೀಗಾಗಿ ಇವರ ಜನ್ಮ ದಿನವನ್ನೇ ದಾದಿಯರ ದಿನವೆಂದು ಪರಿಗಣಿಸಲಾಗಿದೆ.
ದಾದಿಯರ ದಿನಾಚರಿಸುವ ಕಲ್ಪನೆಯನ್ನು ಮೊದಲು 1953 ರಲ್ಲಿ ಯುಎಸ್ ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿ ಡೊರೊಥಿ ಸದರ್ಲ್ಯಾಂಡ್ ಪ್ರಸ್ತಾಪಿಸಿದರು. ಈ ಪ್ರಸ್ತಾವನೆಯನ್ನು ಅಮೆರಿಕದ ಆಗಿನ ಅಧ್ಯಕ್ಷ ಡೇವಿಡ್ ಡಿ ಐಸೆನ್‌ಹೋವರ್ ತಿರಸ್ಕರಿಸಿದರು. 1965 ರಲ್ಲಿ ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ನರ್ಸ್ (ಐಸಿಎನ್) ಬಾರ್ ಪ್ರತಿ ವರ್ಷ ಮೇ 12 ರಂದು ದಿನಾಚರಿಸಲು ನಿರ್ಧರಿಸಿತು. ಜನವರಿ 1974 ರಲ್ಲಿ, ಯುಎಸ್ ಅಧ್ಯಕ್ಷ ಡೇವಿಡ್ ಡಿ. ಐಸೆನ್‌ಹೋವರ್ ಮೇ 12 (ಫ್ಲಾರೆನ್ಸ್ ನೈಟಿಂಗೇಲ್ ಜನ್ಮ ದಿನಾಂಕ) ದಿನವನ್ನು ಅಧಿಕೃತವಾಗಿ ಅಂತಾರಾಷ್ಟ್ರೀಯ ನರ್ಸ್ ದಿನ ಎಂದು ಘೋಷಿಸಿದರು.
'ದಿ ಲೇಡಿ ವಿತ್ ದಿ ಲ್ಯಾಂಪ್' -ಫ್ಲಾರೆನ್ಸ್ ನೈಟಿಂಗೇಲ್: ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು 'ದಿ ಲೇಡಿ ವಿತ್ ದಿ ಲ್ಯಾಂಪ್' ಎಂದು ಕರೆಯುತ್ತಾರೆ. ಕ್ರಿಮಿಯಾ ಯುದ್ಧದ ಸಮಯದಲ್ಲಿ ಗಾಯಗೊಂಡ ಸೈನಿಕರನ್ನು ರಾತ್ರಿಯ ಸಮಯದಲ್ಲಿ ಹಾಸಿಗೆಗಳ ನಡುವೆ ಕೈಯಲ್ಲಿ ದೀಪ ಹಿಡಿದುಕೊಂಡು ರೋಗಿಗಳನ್ನು ಆರೈಕೆ ಮಾಡಿದ್ದರು. ಇದರಿಂದಾಗಿ ಇವರಿಗೆ ಈ ಅಡ್ಡ ಹೆಸರು ಬಂದಿದೆ. ಆರೋಗ್ಯ ಕ್ಷೇತ್ರಕ್ಕೆ ನೈಟಿಂಗೇಲ್ ಕೊಡುಗೆಗಳನ್ನು ಗುರುತಿಸಿ ಅಂತಾರಾಷ್ಟ್ರೀಯ ದಾದಿಯರ ದಿನದಂದು ಅವರನ್ನು ವಿಶೇಷವಾಗಿ ಸ್ಮರಿಸಲಾಗುತ್ತದೆ. ಕೋವಿಡ್ ಸಾಂಕ್ರಾಮಿಕದ ನಂತರ ಅದರ ಪರಿಣಾಮವನ್ನು ಈಗಲೂ ಎದುರಿಸುತ್ತಿರುವ ಸಮಯದಲ್ಲಿ ನಾವು, ದಾದಿಯರ ಕರ್ತವ್ಯ, ಸೇವೆ, ಶ್ರಮವನ್ನು ಮರೆಯಲು ಸಾಧ್ಯವಿಲ್ಲ.
ಇದನ್ನೂ ಓದಿ: ಹೊಸ ಪರೀಕ್ಷಾ ಕೇಂದ್ರದಲ್ಲಿ ಇಸ್ರೋದ ಸೆಮಿ-ಕ್ರಯೋಜೆನಿಕ್ ಎಂಜಿನ್ ಪರೀಕ್ಷೆ ಯಶಸ್ವಿ