ನವದೆಹಲಿ (ಭಾರತ): ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ನಿನ್ನೆ ಬೆಳಗ್ಗೆಯಿಂದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಗಣ್ಯರಿಗೆ ರಾತ್ರಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶೇಷ ಔತಣಕೂಟವನ್ನು ಏರ್ಪಡಿಸಿದ್ದರು. ಜಿ20 ಪ್ರತಿನಿಧಿಗಳು ಭಾರತದ ಬಗೆಬಗೆಯ ಸಸ್ಯಹಾರಿ ಖಾದ್ಯಗಳನ್ನು ಸವಿದು ಸಂಭ್ರಮಿಸಿದ್ದಲ್ಲದೇ, ದೇಶೀ ಉಡುಗೆಯುಟ್ಟು ಗಮನ ಸೆಳೆದರು.
ಜಿ20 ಭೋಜನಕೂಟದಲ್ಲಿ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಪತ್ನಿ ಯುಕೊ ಕಿಶಿಡಾ ಅವರು ಹಸಿರು ಬಣ್ಣದ ಸೀರೆಯುಟ್ಟು, ಗುಲಾಬಿ ಕುಪ್ಪಸದೊಂದಿಗೆ ಥೇಟ್ ಭಾರತೀಯ ನಾರಿಯಂತೆ ಆಕರ್ಷಕವಾಗಿ ಕಂಡುಬಂದರು. ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಮುರ್ಮು ಅವರೊಂದಿಗೆ ಫೋಟೋಗೆ ಪೋಸ್ ಕೊಟ್ಟರು.
ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಔತಣಕೂಟ ನಡೆಯುವ ವೈಭವೋಪೇತ ಭಾರತ್ ಮಂಟಪಕ್ಕೆ ನೇರಳೆ ಬಣ್ಣದ ಚೂಡಿ, ಚಿನ್ನದ ಬಣ್ಣದ ದುಪಟ್ಟಾ ಧರಿಸಿ ಆಗಮಿಸಿದ್ದರು.
ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರ ಪತ್ನಿ ತ್ಶೆಪೋ ಮೊಟ್ಸೆಪೆ ಅವರು ನೇರಳೆ ಮತ್ತು ಗೋಲ್ಡ್ ಬಣ್ಣದ ಇಂಡೋ-ವೆಸ್ಟರ್ನ್ ಉಡುಪು ಧರಿಸಿದ್ದರು. ಕೂದಲನ್ನು ಹಿಂಭಾಗದಲ್ಲಿ ಕಟ್ಟಿ, ಹೂವು ಜೋಡಿಸಿದ್ದರು.
ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಅವರು ಕಪ್ಪು ಬಂಧಗಾಲಾ ಸೂಟ್‌ನಲ್ಲಿ ಭೋಜನಕ್ಕೆ ಬಂದರು. ಇವರ ಪತ್ನಿ ಕೊಬಿತಾ ಜುಗ್ನಾಥ್ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದರು.
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮುತ್ತಿನ ಹಾರ ಧರಿಸಿ, ಸೀರೆಯಲ್ಲಿ ಮೋಡಿ ಮಾಡಿದರು.
ಯುಕೆ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಕರ್ನಾಟಕದ ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಮಗಳು ಅಕ್ಷತಾ ಕೂಡ ಡಿನ್ನರ್‌ನಲ್ಲಿ ಭಾಗಿಯಾಗಿದ್ದರು. ತಮ್ಮ ಆಧುನಿಕ ಉಡುಪಿಗೆ ಸಾಂಪ್ರದಾಯಿಕ ಸ್ಪರ್ಶ ನೀಡಿದ್ದರು.
ಭೋಜನಕೂಟ ಕಾರ್ಯಕ್ರಮ ಆರಂಭಕ್ಕೂ ಮುನ್ನ ರಾಷ್ಟ್ರಪತಿ ಮುರ್ಮು ಮತ್ತು ಪ್ರಧಾನಿ ಮೋದಿ ಅವರು ವಿಶ್ವ ನಾಯಕರನ್ನು ಡಯಾಸ್‌ನಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.
ಇದನ್ನೂ ಓದಿ : ಜಿ-20 ಶೃಂಗದ ನಡುವೆ ಪ್ರಧಾನಿ ಮೋದಿ, ಇಂಗ್ಲೆಂಡ್ ಪ್ರಧಾನಿ ಸುನಕ್ ದ್ವಿಪಕ್ಷೀಯ ಸಭೆ; ವಿಡಿಯೋ
ಪ್ರಧಾನಿ ಮೋದಿ ಬಿಳಿ ಕುರ್ತಾ, ವಿ ಆಕಾರದ ಕುತ್ತಿಗೆ ಪಟ್ಟಿಯುಳ್ಳ ಜಾಕೆಟ್‌ನಲ್ಲಿ ಆಗಮಿಸಿದ್ದರು. ದ್ರೌಪದಿ ಮುರ್ಮು ಸಾಂಪ್ರದಾಯಿಕ ಬೀಜ್ ಸೀರೆ ಧರಿಸಿದ್ದರು. ಔತಣಕೂಟಕ್ಕೂ ಮುನ್ನ ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಮೋದಿ ವಿಶ್ವ ನಾಯಕರನ್ನು ಭೇಟಿ ಮಾಡಿದ್ದರು. 'ವಸುಧೈವ ಕುಟುಂಬಕಂ - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಥೀಮ್ನೊಂದಿಗೆ ಭಾರತ ಐತಿಹಾಸಿಕ ಶೃಂಗಸಭೆ ಆಯೋಜಿಸುತ್ತಿದೆ. (ಎಎನ್ಐ)
ಇದನ್ನೂ ಓದಿ : G-20 Summit : ಪಂಜಾಬಿನ ಸಾಂಪ್ರದಾಯಿಕ ಫುಲ್ಕಾರಿ ಕಸೂತಿಗೆ ವಿದೇಶಿಗರು ಫಿದಾ