ಹೈದರಬಾದ್: ಇಂದು ಅಂತಾರಾಷ್ಟ್ರೀಯ ಕಾಫಿ ದಿನ. ಪ್ರತೀ ವರ್ಷ ಅಕ್ಟೋಬರ್ 1 ರಂದು ಕಾಫಿ ಪ್ರಿಯರಿಗಾಗಿಯೇ ಈ ದಿನವನ್ನು ಆಚರಿಸಲಾಗುತ್ತದೆ. ಕೆಲಸ ಮಾಡಿ ಸುಸ್ತಾಗಿದ್ದರೆ ನಿಮಗಿಷ್ಟವಾದ ಒಂದು ಕಪ್ ಕಾಫಿ ಸವಿದು ನೋಡಿ..!
ಆಹಾ...! ಅದರ ಮಜಾನೇ ಬೇರೆ. ಚುಮುಚುಮು ಚಳಿಯಲ್ಲಿ ಬಿಸಿ ಬಿಸಿ ಕಾಫಿ ಹೀರುತ್ತಾ ದಿನ ಪತ್ರಿಕೆ ಓದುತ್ತಿದ್ದರೆ ಆ ದಿನದ ಚರಿತ್ರೆಯೇ ಬೇರೆಯಾದ್ದಾಗಿರುತ್ತದೆ. ಇಂತಹ ಅದೃಷ್ಟ ಹಾಗೂ ಅನುಭವ ಎಷ್ಟು ಜನ ಕಂಡಿದ್ದೀರಿ ಹೇಳಿ? ಹೊರಗಡೆ ಸುರಿಯುತ್ತಿರುವ ಮಳೆ... ರಾತ್ರಿಯಿಂದ ತಂಪಾದ ವಾತಾವರಣ... ಇದು ಕಾಫಿ ಕುಡಿಯಲು ಹೇಳಿ ಮಾಡಿಸಿದ ದಿನ. ಇದನ್ನೆಲ್ಲ ನೋಡಿ ನಿಮಗೂ ಈಗ ಕಾಫಿ ಕುಡಿಯಬೇಕು ಅನ್ನಿಸುತ್ತಿದೆಯೇ? ಹಾಗಾದರೆ ತಡವೇಕೆ? ಒಂದು ಕಪ್ ಕಾಫಿ ಸವಿದು ಬಣ್ಣಿ. ಕಾಫಿ ಕುಡಿಯುವ ಹವ್ಯಾಸದಿಂದ ಏನೆಲ್ಲ ಲಾಭ ಅನ್ನೋದನ್ನು ತಿಳಿಯೋಣ.
ಬೆಳಗಿನ ದಿನಚರಿ ಬದಲಾವಣೆ:
ಅನೇಕರಿಗೆ ಬೆಳಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಕೈಗೆ ಕಾಫಿ ಸಿಗದಿದ್ದರೆ ಮುಗಿದೇ ಹೋಯಿತು. ರಂಪಾಟ ಶುರುವಾಯಿತಂಲೇ ಅರ್ಥ. ಇದನ್ನು ತಪ್ಪಿಸಲು ಈ ಕಾಫಿ ಒಂದು ಮದ್ದು. ಹಾಗಾಗಿ ದಿನದ ಆರಂಭವನ್ನು ಒಂದು ಕಪ್ ಬಿಸಿ ಬಿಸಿ ಕಾಫಿಯಿಂದ ಶುರುವಾದರೆ ದಿನಪೂರ್ತಿ ಉಲ್ಲಾಸವಿರುತ್ತದೆ. ಇದನ್ನು ನೀವು ಸಹ ಕೆಲವು ದಿನಗಳ ರೂಢಿಸಿಕೊಂಡು ನೋಡಿ.
ಅಂಗೈಯಲ್ಲಿ ಆರೋಗ್ಯ:
ಒಂದು ಲೋಟ ಕಾಫಿ ನಮ್ಮ ಆರೋಗ್ಯ ಸುಧಾರಿಸುತ್ತದೆ ಅನ್ನೋದನ್ನು ವೈದ್ಯರು ಸಹ ಒಪ್ಪಿಕೊಂಡಿರುವ ವಿಷಯ. ಯಕೃತ್ತಿನ ಜೊತೆಗೆ ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆ ನಿರ್ವಹಿಸುವಲ್ಲಿ ಈ ಕಾಫಿ ಮುಂದು. ಹಾಗಾಗಿ ಕಾಫಿ ಹೀರುವವರು ಯಾವುದೇ ಕಾರಣಕ್ಕೂ ಹಿಂಜರಿಯಬೇಕಿಲ್ಲ. ನಿಮ್ಮ ದೇಹ ಹೊಂದಿಕೊಳ್ಳುವಷ್ಟು ಕಾಫಿ ಕುಡಿದರೆ ಉತ್ತಮ. ಆದರೆ, ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವ ಅಭ್ಯಾಸ ಒಳ್ಳೆಯದಲ್ಲ. ಇನ್ನು ಅತಿಯಾದ ಕಾಫಿ ಸೇವನೆ ದೇಹಕ್ಕೂ ತರವಲ್ಲ ಅನ್ನೋದನ್ನು ನಾವು ತಿಳಿದುಕೊಳ್ಳಬೇಕು.
ದೇಹದ ಕೊಬ್ಬು ತಗ್ಗಿಸುತ್ತೆ:
ಕಾಫಿ ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಕೊಬ್ಬು ಸುಡುವ ಪ್ರಕ್ರಿಯೆಗೆ ಸಹಾಯ ಮಾಡುವ ನೈಸರ್ಗಿಕ ವಸ್ತುಗಳಲ್ಲಿ ಕಾಫಿ ಕೂಡಾ ಒಂದು. ಜತೆಗೆ ನಿಮ್ಮ ಮನಸ್ಸನ್ನು ಚುರುಕುಗೊಳಿಸಲು ಇದು ಸಹಾಯ ಮಾಡುತ್ತದೆ. ಕಾರಣ ಇದರಲ್ಲಿ ವಿಟಮಿನ್ 2, ವಿಟಮಿನ್ ಬಿ5, ಮ್ಯಾಂಗನೀಸ್, ಪೊಟ್ಯಾಷಿಯಂ, ಮೆಗ್ನೀಶಿಯಂ, ನಿಯಾಸಿಸ್ ಹೀಗೆ... ಅನೇಕ ಅಗತ್ಯ ಪೋಷಕಾಂಶಗಳಿರುತ್ತವೆ. ಹಾಗಾಗಿ ದೇಹದ ಕೊಬ್ಬು ಕರಗಿಸಿಕೊಳ್ಳಲು ಕಾಫಿ ಉತ್ತಮ ಗೆಳೆಯ ಎಂದು ಹೇಳಲಾಗುತ್ತದೆ.
ಮೆದುಳು... ಮನಸ್ಸು... ದೇಹ... ದಿನಚರಿ ಹೀಗೆ... ಪಟ್ಟಿ ಮಾಡುತ್ತಾ ಹೋದರೆ ಕಾಫಿಯಿಂದ ಹತ್ತು ಹಲವು ಉಪಯೋಗಗಳನ್ನು ಪಡೆಯಬಹುದು. ಪ್ರಾಥಮಿಕ ಮಾಹಿತಿ ಪ್ರಕಾರ ಒಂದು ಕಪ್ ಕಾಫಿಯಿಂದ ಇಷ್ಟು ಲಾಭ ಗಳಿಸಬಹುದು.
ಕಾಫಿಯಲ್ಲಿ ಎಷ್ಟು ವಿಧಗಳಿಗೆ ಗೊತ್ತಾ?
ಕಾಫಿಯಲ್ಲಿ ಇಷ್ಟೇ ವಿಧಗಳಿವೆ ಎಂದು ನಿಖರವಾಗಿ ಹೇಳುವುದು ಕಷ್ಟ. ಆದರೆ, ನೋಡಿದ ಮತ್ತು ಕೇಳಿದು ಕೆಲವು ಕಾಫಿಗಳನ್ನು ಇಲ್ಲಿ ಕೊಡಲಾಗಿದೆ. ಬ್ಲ್ಯಾಕ್ ಕಾಫಿ, ಸಾಮಾನ್ಯ ಕಾಫಿ, ಫಿಲ್ಟರ್ ಕಾಫಿ, ಕೋಲ್ಡ್ ಕಾಫಿ, ಕ್ಯಾಪುಚಿನೋ ಕಾಫಿ ಸೇರಿದಂತೆ ಹತ್ತಾರು ಬಗೆಯ ಕಾಫಿಗಳನ್ನು ನಾವು ಕಾಣಬಹುದು.
ಕಾಫಿ ಇತಿಹಾಸ:
ಇಥಿಯೋಪಿಯಾದಲ್ಲಿ ಸುಮಾರು11ನೇ ಶತಮಾನದಲ್ಲಿ ಮೊದಲಿಗೆ ಕಾಫಿ ಪರಿಚಯವಾಯಿತು. ಬ್ರೆಜಿಲ್ ವಿಶ್ವದಲ್ಲೇ ಅತಿ ಹೆಚ್ಚು ಕಾಫಿ ಬೆಳೆಯುವ ದೇಶ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಇನ್ನು 1670ನೇ ಇಸವಿಯಲ್ಲಿ ಚಿಕ್ಕಮಗಳೂರು ಸಮೀಪದ ಬಾಬಾ ಬುಡನ್ ಗಿರಿಯಲ್ಲಿ ದೇಶದಲ್ಲೇ ಮೊದಲ ಕಾಫಿ ಬೆಳೆ ಬೆಳೆಯಲಾಯಿತು. ಇನ್ನು 2015ರಿಂದ ಇತ್ತೀಚೆಗೆ ಹೆಚ್ಚು ಟ್ರೆಂಡಿಂಗ್ ಆಗಿದ್ದರಿಂದ ಅಂತಾರಾಷ್ಟ್ರೀಯ ಕಾಫಿ ದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತದೆ.
ಅಂಕಿ - ಅಂಶವೇ ಹೇಳುವಂತೆ ಕರ್ನಾಟಕವು ಇಡೀ ದೇಶದಲ್ಲೇ ಕಾಫಿ ಉತ್ಪಾದನೆ ಹಾಗೂ ಬಳಕೆಯಲ್ಲಿ ಗಣನೀಯ ಪಾಲು ಹೊಂದಿದೆ. ಅದರಲ್ಲೂ ಮಲೆನಾಡಿನ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲೇ ಶೇ. 70ರಷ್ಟು ಪಾಲು ಇದ್ದರೆ, ಇದರಲ್ಲಿ ಪುಟ್ಟ ಜಿಲ್ಲೆ ಕೊಡಗು ದೇಶದ ಕಾಫಿ ಉತ್ಪಾದನೆಯಲ್ಲಿ ಶೇ. 30ಕ್ಕೂ ಅಧಿಕ ಪಾಲು ಹೊಂದಿದೆ ಎನ್ನಲಾಗುತ್ತದೆ.