ನವದೆಹಲಿ: ಬಾಲಿವುಡ್ ಸಿನಿಮಾವೊಂದನ್ನು ವೀಕ್ಷಿಸಿ ಅದರಿಂದ ಪ್ರೇರೇಪಿತರಾದ ಇಬ್ಬರು ಯುವಕರು ಸ್ನೇಹಿತನೋರ್ವನ ಅಪಹರಣ ಮಾಡಿ, ಹಣದಾಸೆಗೆ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಉತ್ತರ ದೆಹಲಿಯ ಬುರಾರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿರುವ ಪೊಲೀಸರು ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರನ್ನ ಗೋಪಾಲ್ ಮತ್ತು ಸುಶೀಲ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಸೇರಿ ರೋಹನ್ ಎಂಬಾತನನ್ನ ಅಪಹರಿಸಿದ್ದರು, ನಂತರ ಕೊಲೆ ಮಾಡಿದ್ದಾರೆ. ಬಾಲಿವುಡ್ನಲ್ಲಿ ತೆರೆ ಕಂಡಿರುವ ಸಿನಿಮಾ ವೀಕ್ಷಣೆ ಬಳಿಕ ಆರೋಪಿಗಳು ಈ ಆಲೋಚನೆ ಮಾಡಿದ್ದಾಗಿ ತಿಳಿದುಬಂದಿದೆ.
ಬರ್ತಡೇ ಪಾರ್ಟಿ ಎಂದು ಸುಳ್ಳು ಹೇಳಿ ರೋಹನ್ ಎಂಬಾತನನ್ನು ಕರೆದುಕೊಂಡು ಹೋಗಿರುವ ಇವರು, ಕೊಲೆ ಮಾಡಿದ್ದಾರೆ. ತಡರಾತ್ರಿ ಆದರೂ ಆತ ಮನೆಗೆ ವಾಪಸ್ ಬಾರದ ಕಾರಣ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದೂರು ನೀಡಿದ್ದರೆಂದು ಡಿಸಿಪಿ ಸಾಗರ್ ಸಿಂಗ್ ಕಲ್ಸಿ ತಿಳಿಸಿದ್ದಾರೆ.
ಆರೋಪಿಗಳು ಸಿಕ್ಕಿಬಿದ್ದಿದ್ದೇ ರೋಚಕ: ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಮೊಬೈಲ್ ನಂಬರ್ನಿಂದ ಲೊಕೇಶನ್ ಟ್ರ್ಯಾಕ್ ಮಾಡಿದ್ದು, ಈ ವೇಳೆ ಅದು ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಪತ್ತೆಯಾಗಿದೆ. ಇದರ ಜೊತೆಗೆ ದೆಹಲಿಯ ಬುರಾರಿ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿನ ಸಾವಿರಾರು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಿದ್ದಾರೆ. ಪೊಲೀಸರು ತಮ್ಮ ಬೆನ್ನು ಹತ್ತಿದ್ದಾರೆಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಆರೋಪಿಗಳ ಪೈಕಿ ಓರ್ವ ಮೃತ ವ್ಯಕ್ತಿಯ ಮೊಬೈಲ್ ತೆಗೆದುಕೊಂಡು ಮೊರಾದಾಬಾದ್ಗೆ ತೆರಳಿದ್ದು, ಮೇಲಿಂದ ಮೇಲೆ ಸ್ಥಳ ಬದಲಿಸಿದ್ದಾನೆ. ಆದರೆ, ಇದರ ಸುಳಿವು ಹಿಡಿದುಕೊಂಡು ಹೋಗಿರುವ ಪೊಲೀಸರು ಕಳೆದ ಮಂಗಳವಾರ ಮಧ್ಯರಾತ್ರಿ ಗೋಪಾಲ್ನನ್ನು ಬಂಧಿಸಿದ್ದಾರೆ. ಆತನ ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವ ವಿಚಾರವನ್ನು ಬಹಿರಂಗಪಡಿಸಿದ್ದಾನೆ.
ರೋಹನ್ ಶವವನ್ನ ಹರಿತ್ ನಗರದ ಪ್ಲಾಟ್ನಲ್ಲಿ ಬಚ್ಚಿಟ್ಟಿದ್ದಾಗಿ ತಿಳಿಸಿದ್ದಾನೆ. ಆತನ ಮೃತದೇಹ ವಶಕ್ಕೆ ಪಡೆದ ನಂತರ ಮತ್ತೋರ್ವ ಆರೋಪಿ ಸುಶೀಲ್ನನ್ನು ಬಂಧಿಸಿದ್ದಾರೆ. ಗೋಪಾಲ್ ಕೆಲಸ ಮಾಡ್ತಿದ್ದ ಶಾಪಿಂಗ್ ಮಾಲ್ಗೆ ಮೇಲಿಂದ ಮೇಲೆ ರೋಹನ್ ಭೇಟಿ ನೀಡಿ, ವಿವಿಧ ವಸ್ತು ಖರೀದಿಸುತ್ತಿದ್ದನು. ಆತ ಶ್ರೀಮಂತ ಮನೆತನದ ಹುಡುಗ ಎಂದು ಭಾವಿಸಿ, ಅಪಹರಿಸಿ ಸುಲಿಗೆ ಮಾಡುವ ಯೋಜನೆ ಹಾಕಿಕೊಂಡಿದ್ದರು.
ಹಣದಾಸೆಗೆ ಅಪಹರಣ, ಕೊಲೆ: ಹೀಗಾಗಿ ರೋಹನ್ ಜೊತೆ ಗೋಪಾಲ್ ಸ್ನೇಹ ಬೆಳೆಸಿದ್ದಾನೆ. ಜನವರಿ 16ರಂದು ಹುಟ್ಟುಹಬ್ಬದ ನಿಮಿತ್ತ ತಮ್ಮ ರೂಮ್ಗೆ ಬರುವಂತೆ ಆಹ್ವಾನ ನೀಡಿದ್ದಾನೆ. ಈ ವೇಳೆ ಆತನನ್ನ ಕೊಲೆ ಮಾಡಿದ್ದು, ಮೃತದೇಹವನ್ನು ಅಲ್ಲೇ ಬಿಟ್ಟು ತೆರಳಿದ್ದಾರೆ. ಮರುದಿನ ರೋಹನ್ ಕುಟುಂಬಕ್ಕೆ ಕರೆ ಮಾಡಿ ಹಣ ಸುಲಿಗೆ ಮಾಡುವ ಯೋಜನೆ ಇಟ್ಟುಕೊಂಡಿದ್ದರು. ಇದರ ಬೆನ್ನಲ್ಲೇ ಪೊಲೀಸರಿಗೆ ಕುಟುಂಬಸ್ಥರು ದೂರು ನೀಡಿರುವ ಕಾರಣ, ಆರೋಪಿಗಳ ಬಂಧನವಾಗಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ