ಇಂದೋರ್ (ಮಧ್ಯಪ್ರದೇಶ): ದೇಶದ ಅತ್ಯಂತ ಸ್ವಚ್ಛ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಧ್ಯಪ್ರದೇಶದ ಇಂದೋರ್ ನಗರ ಸತತ 5 ವರ್ಷಗಳಿಂದ ಪ್ರಥಮ ಸ್ಥಾನ ಪಡೆದು ಬೀಗುತ್ತಿದೆ. 61ನೇ ಸ್ಥಾನದಿಂದ ಮೊದಲ ಸ್ಥಾನ ಮತ್ತು ಅತ್ಯಂತ ಸ್ವಚ್ಛ ನಗರಿ ಇಂದೋರ್ ಸಾಧನೆಯ ಹಾದಿ ರೋಚಕವಾಗಿದೆ. ಈ ವರ್ಷ 5ನೇ ಬಾರಿಗೆ ಇಂದೋರ್ ಸ್ವಚ್ಛ ನಗರ ಎಂಬ ಕೀರ್ತಿ ಪಡೆದಿದೆ.
2017ರಲ್ಲಿ ನೈರ್ಮಲ್ಯ ವ್ಯವಸ್ಥೆಗಳ ನಿರ್ವಹಣೆಯನ್ನು ಸುಧಾರಿಸುವ ಕೆಲಸ ಪ್ರಾರಂಭವಾಯಿತು. ಮೊದಲ ಬಾರಿಗೆ ಪ್ರತಿಯೊಂದು ಮನೆಯ ಬಾಗಿಲಿನಿಂದ ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಮನೆ ಮನೆ ಕಸ ಸಂಗ್ರಹಕ್ಕಾಗಿ ಆಧುನಿಕ ಯಂತ್ರಗಳು ಸಿದ್ಧಗೊಂಡವು. ಕೈಗಾರಿಕಾ ಪ್ರದೇಶಗಳಿಂದ ದಿನಕ್ಕೆರಡು ಬಾರಿಯಂತೆ ಕಸ ಸಂಗ್ರಹಿಸಲು ಪ್ರಾರಂಭಿಸಲಾಯಿತು. ನಗರದ 10 ಸ್ಥಳಗಳಲ್ಲಿ ಸಾರಿಗೆ ಕೇಂದ್ರಗಳನ್ನು ನಿರ್ಮಿಸಲಾಗಿದ್ದು, ಅಲ್ಲಿಂದಲೇ ಎಲ್ಲಾ ತ್ಯಾಜ್ಯಗಳ ವಿಭಜನೆ ಕೆಲಸ ನಡೆಯಿತು.
2017ರಲ್ಲಿ ಗೆದ್ದ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದು ಇಂದೋರ್‌ಗೆ ದೊಡ್ಡ ಸವಾಲಾಗಿತ್ತು. ಪ್ರತಿಯೊಂದು ಮನೆಯಿಂದಲೂ ಕಸವನ್ನು ನಿಯಮಿತವಾಗಿ ತೆಗೆದುಕೊಳ್ಳಲಾಗುತ್ತಿತ್ತು. ಈಗ ಮಹಾನಗರ ಪಾಲಿಕೆ ಕೂಡ ಪ್ರತಿ ಮನೆಯಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಹಸಿ ಮತ್ತು ಒಣ ತ್ಯಾಜ್ಯಗಳಾಗಿ ವಿಂಗಡಿಸಲು ಪ್ರಾರಂಭಿಸಿದೆ. ಒಣ ತ್ಯಾಜ್ಯದಿಂದ ಅನೇಕ ರೀತಿಯ ವಸ್ತುಗಳನ್ನು ತಯಾರಿಸಲು ಪ್ರಾರಂಭಿಸಲಾಗಿದೆ. ನಗರದಲ್ಲಿ ಹಸಿ ತ್ಯಾಜ್ಯವನ್ನು ಬಳಸಿ ಗೊಬ್ಬರ ತಯಾರಿಸಲಾಗುತ್ತಿದೆ.
2019ರಲ್ಲಿ ಮಹಾನಗರ ಪಾಲಿಕೆ ಮೂರು ಪರಿಕಲ್ಪನೆಯನ್ನು ಹೊರತಂದಿತು. ರಿಸೈಕಲ್, ರಿಯೂಸ್, ರೆಡ್ಯೂಸ್ ಎಂಬ ಕಲ್ಪನೆ ಮೂಲಕ ತ್ಯಾಜ್ಯಕ್ಕೆ ಕಡಿವಾಣ ಹಾಕುವ ನಿರ್ಧಾರ ಮಾಡಲಾಯಿತು. ಇಷ್ಟೇ ಅಲ್ಲದೇ ನಗರದಲ್ಲಿ ಕಸ ಸಂಸ್ಕರಣಾ ಘಟಕ ತೆರೆಯಲಾಯಿತು. ಅಲ್ಲದೆ 7 ಸಾವಿರಕ್ಕೂ ಅಧಿಕ ಸ್ವಚ್ಛ ಕಾರ್ಮಿಕರ ಸೈನ್ಯವನ್ನೇ ನೇಮಕ ಮಾಡಲಾಯಿತು. ರಾತ್ರಿ ಇಡೀ ನಗರದ ರಸ್ತೆರಗಳನ್ನೆಲ್ಲಾ ಸ್ವಚ್ಛ ಮಾಡಲಾಗುತ್ತಿತ್ತು. ಇಷ್ಟಾದರೂ ನಗರದಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗುತ್ತಿತ್ತು.
ಇಂದೋರ್ 2021ರಲ್ಲಿ ಮತ್ತೊಮ್ಮೆ ಪ್ರಥಮ ಸ್ಥಾನಕ್ಕೆ ಬರಲು ಸಿದ್ಧವಾಗಿದೆ. ಚರಂಡಿಗಳ ಸ್ವಚ್ಛತೆಗಾಗಿ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಒಳಚರಂಡಿ ನೀರು ನದಿಗಳಿಗೆ ಸೇರದಂತೆ ಕ್ರಮ ವಹಿಸಲಾಗುತ್ತಿದೆ. ಇದರಿಂದ ನದಿಗಳು ತಮ್ಮ ಮೂಲ ಸ್ವರೂಪಕ್ಕೆ ಮರಳುತ್ತಿವೆ. ಇಂದೋರ್ನಂತೆ ದೇಶದ ಎಲ್ಲಾ ನಗರಗಳು ಸ್ವಚ್ಛತೆಗಾಗಿ ಶ್ರಮವಹಿಸಿದರೆ ಭವಿಷ್ಯದಲ್ಲಿ ಸ್ವಚ್ಛ ಭಾರತದ ಕನಸು ನನಸಾಗಲಿದೆ.