ಚಂಡೀಗಢ: ಪ್ರತಿಕೂಲ ಹವಾಮಾನದಿಂದಾಗಿ ಮತ್ತೊಮ್ಮೆ ಇಂಡಿಗೋ ವಿಮಾನ ನೆರೆಯ ಪಾಕಿಸ್ತಾನ ವಾಯುಪ್ರದೇಶವನ್ನು ಪ್ರವೇಶಿಸಿರುವ ಘಟನೆ ಭಾನುವಾರ ನಡೆದಿದೆ. ಎರಡು ವಾರಗಳ ಹಿಂದಷ್ಟೇ ಹವಮಾನ ವೈಪರಿತ್ಯದಿಂದಾಗಿ ಇಂಡಿಗೋ ವಿಮಾನ ಪಾಕಿಸ್ತಾನ ಪ್ರವೇಶಿಸಿತ್ತು. ಇದೀಗ ಎರಡನೇ ಬಾರಿ ಇಂತಹ ಘಟನೆ ನಡೆದಿದೆ.
ಮಾಹಿತಿ ಪ್ರಕಾರ, ಭಾನುವಾರ ಮಧ್ಯಾಹ್ನ ಶ್ರೀನಗರ-ಜಮ್ಮು 6E2124 ಸಂಖ್ಯೆಯ ಇಂಡಿಗೋ ವಿಮಾನ ಶ್ರೀನಗರದಿಂದ ಮಧ್ಯಾಹ್ನ 3.36ರ ಸುಮಾರಿಗೆ ಜಮ್ಮುವಿಗೆ ಹೊರಟಿತ್ತು. ಟೇಕ್ ಆಫ್ ಆದ 28 ನಿಮಿಷಗಳ ನಂತರ, ಪ್ರತಿಕೂಲ ಹವಾಮಾನದಿಂದಾಗಿ ಜಮ್ಮು ಮತ್ತು ಕಾಶ್ಮೀರದ ಕೋಟೆ ಜಮೀಲ್ ಮೂಲಕ ವಿಮಾನವು ಪಾಕಿಸ್ತಾನವನ್ನು ಪ್ರವೇಶಿಸಿದೆ.
ಸುಮಾರು 5 ನಿಮಿಷಗಳ ಕಾಲ ಪಾಕಿಸ್ತಾನದ ವಾಯುಪ್ರದೇಶದಲ್ಲಿ ಉಳಿದಿದ್ದ ವಿಮಾನ ಬಳಿಕ ಸಿಯಾಲ್ಕೋಟ್ ಮೂಲಕ ಜಮ್ಮುವಿಗೆ ಹೊರಟಿತು. ಆದರೆ, ಜಮ್ಮುವಿನಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ವಿಮಾನವು ಅಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗದೇ ಅಮೃತಸರಕ್ಕೆ ತೆರಳಿದೆ. ಭಾರತ ಪ್ರವೇಶಿಸಿದ ವಿಮಾನ ಸಂಜೆ 4.25ರ ಸುಮಾರಿಗೆ ಅಮೃತಸರಕ್ಕೆ ತಲುಪಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ: ಪ್ರತಿಕೂಲ ಹವಾಮಾನದಿಂದಾಗಿ ಶ್ರೀನಗರ - ಜಮ್ಮು ಇಂಡಿಗೋ ವಿಮಾನವು ಭಾನುವಾರ ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿದೆ ಎಂದು ವಿಮಾನಯಾನ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೇ, ಏರ್ಲೈನ್ಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದು, "ಕೆಟ್ಟ ಹವಾಮಾನದ ಕಾರಣ, ಇಂಡಿಗೋ ಫ್ಲೈಟ್ 6e-2124 ಸ್ವಲ್ಪ ಸಮಯದವರೆಗೆ ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿತು. ಬಳಿಕ ಅಲ್ಲಿಂದ ಅಮೃತಸರದಲ್ಲಿ ಲ್ಯಾಂಡಿಂಗ್ ಮಾಡಲಾಯಿತು." ಇಂಡಿಗೋ ವಿಮಾನವು ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸುವ ಮೊದಲು, ಎರಡೂ ದೇಶಗಳ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು ಎಂದು ಏರ್ಲೈನ್ಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕೆಲದಿನಗಳ ಹಿಂದೆಯೂ ನಡೆದಿದ್ದ ಘಟನೆ : ಇದೇ ತಿಂಗಳೂ ಜೂ.11ರಂದು ಪ್ರತಿಕೂಲ ಹವಾಮಾನದಿಂದಾಗಿ ಅಮೃತಸರ ಮತ್ತು ಅಹಮದಾಬಾದ್ ನಡುವೆ ಹಾರಾಟ ಮಾಡುತ್ತಿದ್ದ ಇಂಡಿಗೋ ವಿಮಾನ ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿತ್ತು. ಅಮೃತಸರ ವಿಮಾನ ನಿಲ್ದಾಣದಿಂದ ಗುಜರಾತ್ನ ಅಹಮದಾಬಾದ್‌ಗೆ ಇಂಡಿಗೋ ವಿಮಾನ- 6e-645 ಹಾರಾಟ ಆರಂಭಿಸಿತ್ತು. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ಪಾಕಿಸ್ತಾನದ ವಾಯುಪ್ರದೇಶಕ್ಕೆ ತೆರಳಿತ್ತು.
ಅಮೃತಸರದಿಂದ ರಾತ್ರಿ 8 ಗಂಟೆಗೆ ವಿಮಾನ ಹೊರಟಿತ್ತು. ಬಳಿಕ ಪಾಕಿಸ್ತಾನ ವಾಯು ಪ್ರದೇಶ ತಲುಪಿದ ವಿಮಾನ ರಾತ್ರಿ 9:40ಕ್ಕೆ ಪಾಕಿಸ್ತಾನದ ಗುಜ್ರಾನ್‌ವಾಲಾನಿಂದ ಅಹಮದಾಬಾದ್‌ಗೆ ಸುರಕ್ಷಿತವಾಗಿ ಬಂದಿಳಿದಿತ್ತು.
ಇದನ್ನೂ ಓದಿ: Bad Weather: ಮಾರ್ಗ ಬದಲಿಸಿ ಪಾಕಿಸ್ತಾನ ಪ್ರವೇಶಿಸಿದ್ದ ಇಂಡಿಗೋ ವಿಮಾನ!