ನವದೆಹಲಿ: ಈ ವರ್ಷದ 'ಆರೋಗ್ಯ ಬಜೆಟ್' ಅಸಾಧಾರಣವಾದುದು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಕಳೆದ ವರ್ಷ ಕೊರೊನಾದಿಂದಾಗಿ ಭಾರತ ಮತ್ತು ದೇಶದ ಆರೋಗ್ಯ ಕ್ಷೇತ್ರ ಅಗ್ನಿ ಪರೀಕ್ಷೆ ಎದುರಿಸಿ, ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ ಎಂದಿದ್ದಾರೆ.
ಆರೋಗ್ಯ ಕ್ಷೇತ್ರದ ಬಜೆಟ್ ಅನುಷ್ಠಾನ ಕುರಿತ ವೆಬಿನಾರ್ ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಆರೋಗ್ಯ ಕ್ಷೇತ್ರಕ್ಕೆ ಈ ಬಾರಿ ನಿಗದಿಪಡಿಸಿರುವ ಬಜೆಟ್ ಅಸಾಧಾರಣವಾಗಿದೆ. ಇದು ಆರೋಗ್ಯ ವಲಯಕ್ಕೆ ನಮ್ಮ ಸರ್ಕಾರಕ್ಕಿರುವ ಬದ್ಧತೆಯನ್ನು ತೋರಿಸುತ್ತದೆ. ಕೋವಿಡ್ ಸಾಂಕ್ರಾಮಿಕವು ಭವಿಷ್ಯದಲ್ಲಿ ನಮಗೆ ಇಂತಹ ಸಮಸ್ಯೆ ಎದುರಿಸಲು ಸದಾ ಸಿದ್ಧವಾಗಿರಬೇಕು ಹಾಗೂ ಇದಕ್ಕಾಗಿ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವುದು ಅವಶ್ಯಕವಾಗಿದೆ ಎಂಬ ಪಾಠವನ್ನು ಕಲಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ಕೆಂಪು ಕೋಟೆ ಹಿಂಸಾಚಾರ: ರೈತ ಮುಖಂಡ ಸೇರಿ ಇಬ್ಬರು 'ಸಂಚುಕೋರರು' ಅರೆಸ್ಟ್
2020, ಭಾರತ ಮತ್ತು ಇಡೀ ವಿಶ್ವದ ಆರೋಗ್ಯ ಕ್ಷೇತ್ರಕ್ಕೆ ಅಗ್ನಿ ಪರೀಕ್ಷೆಯಾಗಿತ್ತು. ಭಾರತ ಈ ಸವಾಲನ್ನು ಜಯಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಹಲವಾರು ಜೀವಗಳನ್ನು ಉಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇಂದು ಭಾರತದ ಆರೋಗ್ಯ ಕ್ಷೇತ್ರದ ಮೇಲೆ ಪ್ರಪಂಚದ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ. 'ಮೇಡ್ ಇನ್ ಇಂಡಿಯಾ' ಲಸಿಕೆಗಳಿಗೆ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ನಾವು ಸಿದ್ಧರಾಗಿರಬೇಕು ಎಂದರು.
2021-22ರ ಕೇಂದ್ರ ಬಜೆಟ್ನಲ್ಲಿ ಆರೋಗ್ಯ ವಲಯಕ್ಕೆ 2,23,846 ಕೋಟಿ ರೂ. ಮೀಸಲಿಡಲಾಗಿದೆ. ಇದು ಕಳೆದ ಬಾರಿಗಿಂತ (94,452) ಶೇ.13.7ರಷ್ಟು ಹೆಚ್ಚಳವಾಗಿದೆ. ವೈಜ್ಞಾನಿಕ ಸಂಶೋಧನೆ, ಔಷಧ, ವೆಂಟಿಲೇಟರ್, ಲಸಿಕೆ ಸೇರಿದಂತೆ ವೈದ್ಯಕೀಯ ವಲಯಕ್ಕೆ ಬೇಕಾದ ಎಲ್ಲ ಮೂಲ ಸೌಕರ್ಯ ಕಲ್ಪಿಸುವುದು ಹಾಗೂ ಜನರಿಗೆ ಆರೋಗ್ಯ ಸೇವೆ ಒದಗಿಸುವತ್ತ ಹೆಚ್ಚು ಗಮನ ಹರಿಸಬೇಕಿದೆ.