ಮುಂಬೈ (ಮಹಾರಾಷ್ಟ್ರ): 400 ಹಾಸಿಗೆ ಸಾಮರ್ಥ್ಯದ ಭಾರತದ ಮೊದಲ 'ಮಕ್ಕಳ ಕೋವಿಡ್ ಕೇರ್ ಸೆಂಟರ್' ಅನ್ನು ಮುಂಬೈನ ಗೋರೆಗಾಂವ್ ಪಟ್ಟಣದ ನೆಸ್ಕೋ (NESCO) ಕೋವಿಡ್ ಕೇಂದ್ರದಲ್ಲಿ ಸ್ಥಾಪಿಸಲಾಗುವುದು ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಸುರೇಶ್ ಕಾಕಾನಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಮಹಾನಗರ ಪಾಲಿಕೆಯ ಅಡಿಯಲ್ಲಿ ಬರುವ ಆಸ್ಪತ್ರೆಗಳಲ್ಲೇ ಸೋಂಕು ತಗುಲಿದ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ತಿಂಗಳೊಳಗಾಗಿ ನೆಸ್ಕೋ ಕೋವಿಡ್ ಕೇಂದ್ರದಲ್ಲಿ ಮಕ್ಕಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು. ಇದು ಆಮ್ಲಜನಕ ಮತ್ತು ಐಸಿಯು ಬೆಡ್ಗಳನ್ನು ಒಳಗೊಂಡಿರುತ್ತದೆ. ನೆಸ್ಕೋ ಬಳಿಕ ನಗರದ ಎಲ್ಲಾ ಕೋವಿಡ್ ಕೇಂದ್ರಗಳಲ್ಲಿ ಮಕ್ಕಳ ವಾರ್ಡ್ ಸ್ಥಾಪಿಸಲಾಗುವುದು ಎಂದು ಸುರೇಶ್ ಕಾಕಾನಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ನಿಂದ ಮೃತಪಟ್ಟ ಅನಾಥೆಯ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂ ಯುವಕರು
3ನೇ ಕೊರೊನಾ ಅಲೆಯಲ್ಲಿ ಸಿಲುಕುವವರು ಮಕ್ಕಳು..
ಕೊರೊನಾ ಮೂರನೇ ಅಲೆ ಇನ್ನಷ್ಟು ಭೀಕರವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲಸಿಕೆ ಹಾಕಿಸಿಕೊಂಡ 18 ವರ್ಷ ಮೇಲ್ಪಟ್ಟವರು 3ನೇ ಅಲೆಯಲ್ಲಿ ಸುರಕ್ಷಿತರಾಗಿರುತ್ತಾರೆ. ಒಂದೊಮ್ಮೆ ಅವರಿಗೆ ಸೋಂಕು ತಗುಲಿದರೂ ಅವರು ಸೌಮ್ಯ ರೋಗಲಕ್ಷಣಗಳನ್ನು ಮಾತ್ರ ಹೊಂದಿರುತ್ತಾರೆ. ಆದರೆ ಮಕ್ಕಳಿಗೆ ಇನ್ನೂ ವ್ಯಾಕ್ಸಿನೇಷನ್ ಆರಂಭಿಸದ ಕಾರಣ ಅವರ ಮೇಲೆ ವೈರಸ್ ಹೆಚ್ಚು ಪ್ರಭಾವ ಬೀರಲಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.