ನವದೆಹಲಿ: ದೇಶದಲ್ಲಿ ಪತ್ತೆಯಾದ ಹೊಸ ಕೋವಿಡ್ ಸೋಂಕಿತರಿಗಿಂತಲೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಬಂದವರೇ ಹೆಚ್ಚಿದ್ದಾರೆ. ಶುಕ್ರವಾರ 1.73 ಲಕ್ಷ ಕೇಸ್ಗಳು ವರದಿಯಾಗಿದ್ದು, 2,84,601 ಮಂದಿ ಗುಣಮುಖರಾಗಿದ್ದಾರೆ.
ಮಾರಣಾಂತಿಕ ವೈರಸ್ನಿಂದ ಈವರೆಗೆ ಒಟ್ಟು 2,51,78,011 ಮಂದಿ ಚೇತರಿಸಿಕೊಂಡಿದ್ದು, ದೇಶದ ಗುಣಮುಖರ ಪ್ರಮಾಣ ಶೇ. 90.80ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು ಸಹ ಕಡಿಮೆಯಾಗುತ್ತಿದ್ದು, ಸದ್ಯ 22,28,724 ಕೇಸ್ಗಳು ಆ್ಯಕ್ಟಿವ್ ಆಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ 3,617 ಮಂದಿ ಸೋಂಕಿಗೆ ಬಲಿಯಾಗಿದ್ದು, 1,73,921 ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಮೃತರ ಸಂಖ್ಯೆ 3,22,512ಕ್ಕೆ ಹಾಗೂ ಸೋಂಕಿತರ ಸಂಖ್ಯೆ 2,77,29,247ಕ್ಕೆ ಹೆಚ್ಚಳವಾಗಿದೆ.
20.89 ಕೋಟಿ ಮಂದಿಗೆ ಲಸಿಕೆ
ಪ್ರಸ್ತುತ ದೇಶದಲ್ಲಿ ಲಸಿಕೆ ಕೊರತೆಯಿಂದಾಗಿ ನಿಧಾನಗತಿಯಲ್ಲಿ ವ್ಯಾಕ್ಸಿನೇಷನ್ ಡ್ರೈವ್ ನಡೆಯುತ್ತಿದ್ದು, ಜನವರಿ 16ರಿಂದ ಇಲ್ಲಿಯವರೆಗೆ ಒಟ್ಟು 20,89,02,445 ಮಂದಿಗೆ ಲಸಿಕೆ ನೀಡಲಾಗಿದೆ.