ವಾಷಿಂಗ್ಟನ್: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಸ್ಥಳೀಯ ಲಸಿಕೆ ಕೋವ್ಯಾಕ್ಸಿನ್ ಕೋವಿಡ್ ರೂಪಾಂತರಿ ವೈರಸ್ ಆಲ್ಫಾ ಮತ್ತು ಡೆಲ್ಟಾಗಳನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ತದೆ ಎಂದು ಯುಎಸ್ ರಾಷ್ಟ್ರೀಯ ಆರೋಗ್ಯ ಸಂಸ್ಥೆ(NIH) ಹೇಳಿದೆ.
ಕೋವ್ಯಾಕ್ಸಿನ್ ಪಡೆದ ವ್ಯಕ್ತಿಗಳ ರಕ್ತದ ಮಾದರಿಗಳನ್ನು ಪರೀಕ್ಷಿಸಿದ ಎರಡು ಅಧ್ಯಯನಗಳಿಂದ, ಕೋವ್ಯಾಕ್ಸಿನ್ SARS-CoV-2 ರೂಪಾಂತರಿಗಳಾದ ಬಿ.1.1.7 ( ಆಲ್ಫಾ) ಮತ್ತು ಬಿ.1.617 ಡೆಲ್ಟಾ ವಿರುದ್ಧ ಪರಿಣಾಮಕಾರಿಯಾಗಿ ಪ್ರತಿಕಾಯಗಳನ್ನು (Antibodies) ಉತ್ಪತಿ ಮಾಡುತ್ತದೆ ಎಂದು ತಿಳಿದು ಬಂದಿರುವುದಾಗಿ ಎನ್ಐಹೆಚ್ (US' National Institute of Health) ಹೇಳಿದೆ.
ಧನ ಸಹಾಯದೊಂದಿಗೆ ಅಭಿವೃದ್ಧಿಪಡಿಸಿದ ಲಸಿಕೆಗೆ ಬಳಸಲಾದ ವಸ್ತುಗಳು ಹೆಚ್ಚು ಪರಿಣಾಮಕಾರಿಯಾದ ಕೋವ್ಯಾಕ್ಸಿನ್ನ ಯಶಸ್ಸಿಗೆ ಕಾರಣವಾಗಿದೆ. ಇದನ್ನು ಭಾರತ ಮತ್ತು ಇತರೆಡೆಗಳಲ್ಲಿ ಇಲ್ಲಿಯವರೆಗೆ ಸುಮಾರು 25 ಮಿಲಿಯನ್ ಜನರಿಗೆ ನೀಡಲಾಗಿದೆ ಎಂದು ಭಾರತದೊಂದಿಗಿನ ಉತ್ತಮ ವೈಜ್ಞಾನಿಕ ಸಹಯೋಗದ ಇತಿಹಾಸ ಹೊಂದಿರುವ ಅಮೆರಿಕದ ಉನ್ನತ ಆರೋಗ್ಯ ಸಂಶೋಧನಾ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ಮಾಡರ್ನಾ ಲಸಿಕೆಗೆ DCGI ಅನುಮೋದನೆ.. ಭಾರತಕ್ಕೆ ಅಮೆರಿಕದ ವ್ಯಾಕ್ಸಿನ್ ಲಗ್ಗೆ!
ಕೋವ್ಯಾಕ್ಸಿನ್ SARS-CoV-2 ಗೆ ಮಾತ್ರ ಬಳಸುವಂತಿದೆ. ಅದನ್ನು ಮತ್ತೆ ಪುನರಾವರ್ತಿಸಲು ಸಾಧ್ಯವಿಲ್ಲ. ಆದರೆ ಅದು ವೈರಸ್ ವಿರುದ್ಧ ಪ್ರತಿಕಾಯಗಳನ್ನು ತಯಾರಿಸಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ. ಲಸಿಕೆಯ 2 ನೇ ಹಂತದ ಪ್ರಯೋಗದಿಂದ ಪ್ರಕಟವಾದ ಫಲಿತಾಂಶಗಳು, ಲಸಿಕೆ ಸುರಕ್ಷಿತ ಎಂದು ಸೂಚಿಸುತ್ತದೆ. ಕೋವಾಕ್ಸಿನ್‌ನ 3 ನೇ ಹಂತದ ಪ್ರಯೋಗದ ಸುರಕ್ಷತಾ ದತ್ತಾಂಶವು ಈ ವರ್ಷದ ಕೊನೆಯಲ್ಲಿ ಲಭ್ಯವಾಗಲಿದೆ ಎಂದು ಎನ್ಐಹೆಚ್ ಹೇಳಿದೆ.
ಆದರೂ, ಮೂರನೇ ಹಂತದ ಪ್ರಯೋಗದ ಮಧ್ಯಂತರ ಫಲಿತಾಂಶಗಳು ಕೋವ್ಯಾಕ್ಸಿನ್ ರೋಗ ಲಕ್ಷಣ ಹೊಂದಿರುವ ಕೋವಿಡ್ ಸೋಂಕಿನ ವಿರುದ್ಧ ಶೇ. 78 ರಷ್ಟು ಪರಿಣಾಮಕತ್ವವನ್ನು ಹೊಂದಿದೆ. ಇದು ಆಸ್ಪತ್ರೆಗೆ ದಾಖಲಾಗುವುದು ಮತ್ತು ತೀವ್ರವಾದ ಸೋಂಕಿನ ಅಪಾಯದ ವಿರುದ್ಧ ಶೇ. 100 ರಷ್ಟು ಪರಿಣಾಮಕತ್ವವನ್ನು ಹೊಂದಿದೆ ಎಂದು ಸಂಸ್ಥೆ ವಿವರಿಸಿದೆ.