ಪೇಶಾವರ (ಪಾಕಿಸ್ತಾನ): ಫೇಸ್‌ಬುಕ್ ಸ್ನೇಹಿತನನ್ನು ಭೇಟಿಯಾಗಲು ನೆರೆ ದೇಶ ಪಾಕಿಸ್ತಾನದ ಹಳ್ಳಿಯೊಂದಕ್ಕೆ ಕಾನೂನುಬದ್ಧವಾಗಿ ಪ್ರಯಾಣಿಸಿದ ಭಾರತೀಯ ವಿವಾಹಿತ ಮಹಿಳೆ ಅಂಜು, ತನ್ನ ವೀಸಾ ಅವಧಿ ಮುಗಿದ ನಂತರ ಆಗಸ್ಟ್ 20ರಂದು ಭಾರತಕ್ಕೆ ಮರಳಲಿದ್ದಾರೆ ಎಂದು ಆಕೆಯ ಪಾಕಿಸ್ತಾನಿ ಸ್ನೇಹಿತ ನಸ್ರುಲ್ಲಾ ಸೋಮವಾರ ಹೇಳಿದ್ದಾರೆ.
'ಮದುವೆ ಆಗುವುದಿಲ್ಲ'- ಅಂಜು ಸ್ನೇಹಿತ ನಸ್ರುಲ್ಲಾ: ಈ ಕುರಿತು ದೂರವಾಣಿ ಮೂಲಕ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ನಸ್ರುಲ್ಲಾ, ನಮ್ಮಿಬ್ಬರದ್ದು ಸ್ನೇಹ ಸಂಬಂಧ, ಪ್ರೇಮ್ ಕಹಾನಿಯಲ್ಲ ಎಂದಿದ್ದಾರೆ. ಅಂಜು ಅವರನ್ನು ಮದುವೆಯಾಗುವ ಯಾವುದೇ ಆಲೋಚನೆಯೂ ನನಗಿಲ್ಲ. ಆಕೆಯ ವೀಸಾ ಅವಧಿ ಆಗಸ್ಟ್ 20ಕ್ಕೆ ಮುಕ್ತಾಯಗೊಳ್ಳಲಿದೆ. ನಂತರ ಭಾರತಕ್ಕೆ ಹಿಂತಿರುಗಲಿದ್ದಾರೆ. ಸದ್ಯ ಅಂಜು ನನ್ನ ಕುಟುಂಬದ ಇತರ ಮಹಿಳಾ ಸದಸ್ಯರೊಂದಿಗೆ ಪ್ರತ್ಯೇಕ ಕೋಣೆಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
'ಅನಗತ್ಯ ಅಪಪ್ರಚಾರ'- ಅಂಜು: ಅಂಜು ಮಾತನಾಡಿ, "ನಾನು ನನ್ನ ಫೇಸ್‌ಬುಕ್ ಸ್ನೇಹಿತನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಬಂದಿದ್ದೇನೆಯೇ ಹೊರತು ಮದುವೆಯಾಗಲು ಬಂದಿಲ್ಲ. ಈ ಕುರಿತು ಅನಗತ್ಯವಾಗಿ ಅಪಪ್ರಚಾರ ಮಾಡಲಾಗುತ್ತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ಅಧಿಕಾರಿಗಳಿಗೆ ಅಂಜು ಸಲ್ಲಿಸಿದ ಅಫಿಡವಿಟ್ನಲ್ಲಿ, ನಮ್ಮ ಸ್ನೇಹಕ್ಕೆ ಯಾವುದೇ ಪ್ರೀತಿಯ ಕೋನವಿಲ್ಲ. ಅಪ್ಪರ್ ದಿರ್ ಜಿಲ್ಲೆಯಿಂದ ಬೇರೆಡೆಗೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ. ಭಾರತಕ್ಕೆ ಮರಳುವ ಬಗ್ಗೆ ಕೇಳಿದ ಪ್ರಶ್ನೆಗೆ, "ಮುಂದಿನ ಮೂರು-ನಾಲ್ಕು ದಿನಗಳಲ್ಲಿ ನಾನು ನನ್ನ ದೇಶಕ್ಕೆ ಹಿಂತಿರುಗುತ್ತೇನೆ" ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಪ್ರತಿಕ್ರಿಯೆ: ಪಾಕಿಸ್ತಾನಿ ಸ್ನೇಹಿತ ನಸ್ರುಲ್ಲಾರನ್ನು ಭೇಟಿಯಾಗಲು ಅಂಜು ಕಾನೂನುಬದ್ಧವಾಗಿ ಪಾಕಿಸ್ತಾನಿ ವೀಸಾದ ಮೇಲೆ ಬುಡಕಟ್ಟು ಪ್ರದೇಶ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಅಪ್ಪರ್ ದಿರ್ ಜಿಲ್ಲೆಗೆ ಪ್ರಯಾಣಿಸಿದ್ದಾರೆ. ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್‌ಗೆ ಕಳುಹಿಸಲಾದ ಆಂತರಿಕ ಸಚಿವಾಲಯದ ಅಧಿಕೃತ ದಾಖಲೆಯ ಪ್ರಕಾರ, ಅಪ್ಪರ್ ದೀರ್ ಜಿಲ್ಲೆಗೆ ಮಾತ್ರ ಮಾನ್ಯವಾಗಿರುವ 30 ದಿನಗಳ ವೀಸಾವನ್ನು ಅಂಜು ಅವರಿಗೆ ನೀಡಲಾಗಿದೆ ಎಂದು ಪಾಕಿಸ್ತಾನ ಹೈಕಮಿಷನ್ ಹೇಳಿದೆ.
ಪಾಕಿಸ್ತಾನ ಡಿಸಿಪಿ ಹೇಳಿಕೆ: ಅಂಜು ಅವರ ವೀಸಾ ದಾಖಲೆಗಳ ಪ್ರಕಾರ, ಅವರು ಖಂಡಿತವಾಗಿಯೂ ಆಗಸ್ಟ್ 20ರೊಳಗೆ ತಮ್ಮ ದೇಶಕ್ಕೆ ಹಿಂತಿರುಗಲಿದ್ದಾರೆ ಎಂದು ಅಪ್ಪರ್ ದಿರ್ ಜಿಲ್ಲಾ ಪೊಲೀಸ್ ಅಧಿಕಾರಿ (ಡಿಪಿಒ) ಮುಷ್ತಾಕ್ ಖಾನ್ ಹೇಳಿದ್ದಾರೆ. ಭಾನುವಾರ ತಮ್ಮ ಕಚೇರಿಯಲ್ಲಿ ಅಂಜು ಅವರನ್ನು ವಿಚಾರಣೆ ನಡೆಸಲಾಗಿದೆ. ಪ್ರಯಾಣದ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಆಕೆ ಪಾಕಿಸ್ತಾನಕ್ಕೆ ಕಾನೂನುಬದ್ಧವಾಗಿಯೇ ಬಂದಿದ್ದು ಅವರಿಗೆ ನಿರಾಕ್ಷೇಪಣಾ ಪ್ರಮಾಣಪತ್ರ ನೀಡಲಾಗಿದೆ ಎಂದು ಹೇಳಿದರು.