ದುಬೈ: ಯುಎಇಯ ಅತಿ ಬೇಡಿಕೆಯ 10 ವರ್ಷಗಳ ಗೋಲ್ಡನ್ ವೀಸಾವನ್ನು ಭಾರತೀಯ ವಿದ್ಯಾರ್ಥಿಯೊಬ್ಬರು ಪಡೆದುಕೊಂಡಿದ್ದಾರೆ. ಇದನ್ನು ಹೆಚ್ಚಾಗಿ ಪ್ರಮುಖ ಜಾಗತಿಕ ವ್ಯಕ್ತಿಗಳಿಗೆ, ಅವರ ಅರ್ಹತೆ ಮತ್ತು ಅತ್ಯುತ್ತಮ ಶೈಕ್ಷಣಿಕ ರುಜುವಾತುಗಳಿಗಾಗಿ ನೀಡಲಾಗುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕೇರಳದ ತಸ್ನೀಮ್ ಅಸ್ಲಾಮ್ ಅಸಾಧಾರಣ ವಿದ್ಯಾರ್ಥಿ ವಿಭಾಗದಲ್ಲಿ ಗೋಲ್ಡನ್ ವೀಸಾ ಪಡೆದಿದ್ದಾರೆ. 2031ರವರೆಗೆ ಆ ಅವರಿಗೆ ದೇಶದಲ್ಲಿ ಉಳಿಯಲು ಅವಕಾಶವಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.
ಯುಎಇ ಸರ್ಕಾರವು 2019ರಲ್ಲಿ ದೀರ್ಘಾವಧಿಯ ನಿವಾಸ ವೀಸಾಗಳಿಗಾಗಿ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದು ವಿದೇಶಿಯರಿಗೆ ರಾಷ್ಟ್ರೀಯ ಪ್ರಾಯೋಜಕರ ಅಗತ್ಯವಿಲ್ಲದೆ ಯುಎಇಯಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ.
ಈ ಗೋಲ್ಡನ್ ವೀಸಾಗಳನ್ನು ಐದು ಅಥವಾ 10 ವರ್ಷಗಳವರೆಗೆ ನೀಡಲಾಗುತ್ತದೆ ಮತ್ತು ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತದೆ.
ಇನ್ನು ಈ ಬಗ್ಗೆ ಮಾತನಾಡಿದ ತಸ್ನೀಮ್, ಇದು ನನ್ನ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದಾಗಿದೆ. ಇದನ್ನು ಸಾಧಿಸಲು ನಾನು ಬಹಳಷ್ಟು ಕಷ್ಟಪಟ್ಟಿದ್ದೇನೆ. ಸರ್ವಶಕ್ತನಾದ ಅಲ್ಲಾಹನಿಗೆ ನಾನು ಕೃತಜ್ಞನಾಗಿದ್ದೇನೆ. ನನ್ನ ಪೋಷಕರ ಬೆಂಬಲವು ಅಗಾಧವಾಗಿದೆ ಎಂದು ತಿಳಿಸಿದರು.
ತಸ್ನೀಮ್ ಅವರು ಶಾರ್ಜಾದ ಅಲ್ ಕಾಸಿಮಿಯಾ ವಿಶ್ವವಿದ್ಯಾಲಯದಿಂದ ಇಸ್ಲಾಮಿಕ್ ಶರಿಯಾವನ್ನು ಅಧ್ಯಯನ ಮಾಡಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ ಸಂಜಯ್ ದತ್ತ ಗೋಲ್ಡನ್ ವೀಸಾ ಪಡೆದಿದ್ದರು.