ನವದೆಹಲಿ: ದೇಶಕ್ಕೆ ಆಪತ್ತು ಬಂದಾಗ ಎದೆಯೊಡ್ಡಿ ಕಾಪಾಡುವವನೇ ಯೋಧ. ದೇಶ ನಿಶ್ಚಿಂತೆಯಿಂದಿರಲು ಗಡಿಯಲ್ಲಿ ಆತ ಕಾವಲು ಕಾಯುತ್ತಿರುತ್ತಾನೆ. ಆದರೆ, ಇಂತಹ ಯೋಧ ಪರದೇಶಕ್ಕೆ ಮಾರಾಟವಾದರೆ ಇಡೀ ರಾಷ್ಟ್ರವೇ ಅಪಾಯಕ್ಕೆ ಸಿಲುಕುತ್ತದೆ. ಚೀನಾ ಗಡಿಯಲ್ಲಿ ನಿಯೋಜಿಸಿದ್ದ ಭಾರತೀಯ ಯೋಧನೊಬ್ಬ ಪಾಕಿಸ್ತಾನಕ್ಕೆ ನಮ್ಮ ಸೇನೆಯ ರಹಸ್ಯ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವ ಆರೋಪದ ಮೇಲೆ ಆತನ ವಿರುದ್ಧ ಸೇನಾ ವಿಚಾರಣೆ ನಡೆಸಲಾಗುತ್ತಿದೆ.
ಚೀನಾ ಮತ್ತು ಭಾರತಕ್ಕೆ ಸೇರಿದ ಉತ್ತರ ಗಡಿಯಲ್ಲಿ ನಿಯೋಜಿಸಲಾಗಿದ್ದ ಯೋಧನೊಬ್ಬ(ಸಿಗ್ನಲ್‌ಮ್ಯಾನ್) ಅಲ್ಲಿನ ಸೇನಾ ನೆಲೆಯ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ರಾಯಭಾರಿ ಕಚೇರಿಯ ಐಎಸ್ಐ ಏಜೆಂಟ್ಗೆ ಕೇವಲ 15000 ರೂಪಾಯಿಗೆ ರವಾನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಆತನನ್ನು ಬಂಧಿಸಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಐಎಸ್ಐ ಏಜೆಂಟ್ ಒಬ್ಬಾತನಿಗೆ ಭಾರತದ ಯೋಧ ನಮ್ಮ ಸೇನಾ ಗೌಪ್ಯ ವಿಚಾರಗಳು, ಗಡಿಯ ನೆಲೆಗಳ ಬಗ್ಗೆ ರಹಸ್ಯವಾಗಿ ಮಾಹಿತಿ ಹಂಚಿಕೊಳ್ಳುತ್ತಿದ್ದ. ಈ ವೇಳೆ ಆತನನ್ನು ಹಿಡಿಯಲಾಗಿದೆ. ಸೇನಾ ನಿಯಮಗಳಂತೆ ಆತನ ವಿರುದ್ಧ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
15 ಸಾವಿರಕ್ಕಾಗಿ ಸೇನಾ ಮಾಹಿತಿ ಹಂಚಿಕೆ: ಪಾಕ್ಗೆ ಏಜೆಂಟ್ ಎಂದು ಹೇಳಲಾದ ಅಬಿದ್ ಹುಸೇನ್ ಅಲಿಯಾಸ್ ನಾಯಕ್ ಅಬಿದ್ ಎಂಬ ಗೂಢಾಚಾರಿಗೆ ಚೀನಾ ಗಡಿಯಲ್ಲಿ ಸಿಗ್ನಲ್‌ಮ್ಯಾನ್ ಆಗಿ ಕೆಲಸ ಮಾಡುವ ಆರೋಪಿ ಯೋಧ ಸೇನೆಯ ರಹಸ್ಯ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ. ಇದಕ್ಕಾಗಿ ದೇಶದ್ರೋಹಿ ಯೋಧನಿಗೆ ಪಾಕಿಸ್ತಾನದ ರಾಯಭಾರಿ ಕಚೇರಿಯ ಅಧಿಕಾರಿಗಳು 15,000 ರೂ. ನೀಡಿದ್ದರು ಎಂದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರ ಗಡಿಯಲ್ಲಿ ಚೀನಾ ಸೇನೆ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ನಡುವೆಯೇ ಯೋಧನ ಈ ಕುಕೃತ್ಯ ಬೆಳಕಿಗೆ ಬಂದಿದೆ. ಪಾಕ್ ಮೂಲಕ ಚೀನಾ ನಮ್ಮ ದೇಶದ ಸೇನಾ ಮಾಹಿತಿಯನ್ನು ಕಲೆ ಹಾಕುತ್ತಿರುವ ಶಂಕೆ ವ್ಯಕ್ತವಾಗಿದೆ. ಈ ನಿರ್ಣಾಯಕ ಕಾಲಘಟ್ಟದಲ್ಲಿ ಭಾರತದ ಸೇನೆಯ ಸಣ್ಣ ಮಾಹಿತಿಯೂ ಕೂಡ ಕುತಂತ್ರಿ ಚೀನಾಕ್ಕೆ ದೊಡ್ಡ ನೆರವು ನೀಡಬಲ್ಲದು ಎಂಬ ಆತಂಕ ವ್ಯಕ್ತವಾಗಿದೆ.
ಸೇನಾ ಮೂಲಗಳ ಪ್ರಕಾರ, ಪಾಕ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದ ಭಾರತೀಯ ಯೋಧನಿಗೆ ಸಣ್ಣಪುಟ್ಟ ಮಾಹಿತಿ ಮಾತ್ರ ಲಭ್ಯವಿದೆ. ಆದರೂ ಸೇನೆಯು ಇಂತಹ ಕೃತ್ಯಗಳಿಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುವುದು ಎಂದು ಅದು ಹೇಳಿದೆ.
ಶತ್ರು ದೇಶ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಗೆ ಯೋಧ ಒದಗಿಸಿದ ದಾಖಲೆಗಳು ತನ್ನ ಸ್ವಂತ ರಚನೆಗಳ ಚಟುವಟಿಕೆಗಳ ಜೊತೆಗೆ ಆತ ನಿಯೋಜಿಸಲ್ಪಟ್ಟ ಪ್ರದೇಶದ ಗಾರ್ಡ್ಗಳ ಕೆಲಸದ ಪಟ್ಟಿಯೂ ಒಳಗೊಂಡಿದೆ. ಕೋವಿಡ್ ವೇಳೆ ಸೇನಾ ವಾಹನವನ್ನು ಯಾವ ರೀತಿಯಲ್ಲಿ ಬಳಕೆ ಮಾಡಲಾಗುತ್ತಿತ್ತು ಎಂಬ ಬಗ್ಗೆಯೂ ಹಂಚಿಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ.
ಗಡಿಯಲ್ಲಿ ಉಪಗ್ರಹ ಸ್ಥಳ ಪ್ರವೇಶಕ್ಕೆ ಯತ್ನ: ಹಣಕ್ಕಾಗಿ ಪಾಕ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದ ಯೋಧ ಚೀನಾ ಗಡಿಯಲ್ಲಿ ಉಪಗ್ರಹಗಳ ಕಾರ್ಯಾಚರಣೆ ನಡೆಸುವ ಸ್ಥಳವನ್ನೂ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ. ಆದರೆ, ಅದು ಯಶಸ್ವಿಯಾಗಿಲ್ಲ. ಗಡಿಯಲ್ಲಿನ ಕಣ್ಗಾವಲು ರಾಡಾರ್ ಮತ್ತು ಇತರ ರೀತಿಯ ಸಲಕರಣೆಗಳ ಸ್ಥಳಗಳನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಇತ್ತೀಚಿನ ದಿನಗಳಲ್ಲಿ ಸೈನಿಕರನ್ನು ಹನಿಟ್ರ್ಯಾಪ್ ಮಾಡಿ ಸೇನೆಯ ಮಾಹಿತಿ ಹಂಚಿಕೊಳ್ಳಲು ಬ್ಲ್ಯಾಕ್‌ಮೇಲ್ ಮಾಡಿದ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪ್ರಕರಣದಲ್ಲಿ ಯಾವುದೇ ಹನಿ ಟ್ರ್ಯಾಪಿಂಗ್ ಅಥವಾ ಬ್ಲ್ಯಾಕ್‌ಮೇಲಿಂಗ್ ನಡೆದಿಲ್ಲ ಎಂದು ಸೇನೆ ಮೂಲಗಳು ತಿಳಿಸಿವೆ.
ಓದಿ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನನ್ನ ಅಧಿಕಾರ ವ್ಯಾಪ್ತಿ ಅಲ್ಲ: ಸುರ್ಜೆವಾಲಾ