ಮುಂಬೈ(ಮಹಾರಾಷ್ಟ್ರ): ಈ ವಾರ ಷೇರು ಮಾರುಕಟ್ಟೆಯಲ್ಲಿ ಐಪಿಒಗಳ ಸುರಿಮಳೆ ನಡೆಯಲಿದೆ. ಸುಮಾರು 4 ಕಂಪನಿಗಳು ಐಪಿಒ ಮೂಲಕ ಸುಮಾರು ₹1,100 ಕೋಟಿ ಸಂಗ್ರಹಿಸಲಿವೆ. ಜ್ಯೋತಿ ಸಿಎನ್‌ಸಿ ಆಟೋಮೇಷನ್, ನ್ಯೂ ಸ್ವಾನ್ ಮಲ್ಟಿಟೆಕ್, ಆಸ್ಟ್ರೇಲಿಯನ್ ಪ್ರೀಮಿಯಂ ಸೋಲಾರ್ ಮತ್ತು ಐಎಫ್‌ಬಿ ಫೈನಾನ್ಸ್ ಕಂಪನಿಗಳು ಐಪಿಒ ಬಿಡುಗಡೆ ಮಾಡಲಿವೆ.
ಜ್ಯೋತಿ ಸಿಎನ್‌ಸಿ ಆಟೋಮೇಷನ್: ಇದು ಹೊಸ ವರ್ಷದಲ್ಲಿ ಮುಖ್ಯ ಬೋರ್ಡ್ ವಿಭಾಗದಲ್ಲಿ ಆಗಮಿಸುತ್ತಿರುವ ಮೊದಲ ಐಪಿಒ. ಜನವರಿ 9ರಿಂದ 11ರವರೆಗೆ ಈ ಇಶ್ಯೂಗೆ ಅರ್ಜಿ ಸಲ್ಲಿಸಬಹುದು. ಪ್ರತಿ ಷೇರಿನ ಬೆಲೆಯ ಶ್ರೇಣಿಯನ್ನು 315-331 ರೂ ಎಂದು ನಿಗದಿಪಡಿಸಲಾಗಿದೆ. ಕಂಪನಿಯು 1,000 ಕೋಟಿ ಹಣ ಸಂಗ್ರಹಿಸಲಿದೆ. ಸಂಪೂರ್ಣವಾಗಿ ತಾಜಾ ಷೇರುಗಳನ್ನು ನೀಡಲಾಗುತ್ತದೆ. ಕಂಪ್ಯೂಟರ್ ನಮರಿಕಲ್ ಕಂಟ್ರೋಲ್ (ಸಿಎನ್‌ಸಿ) ಯಂತ್ರ ತಯಾರಕರಾದ ಜ್ಯೋತಿ ಸಿಎನ್‌ಸಿ, ಇತ್ತೀಚಿನ ಐಪಿಒ ಮೂಲಕ ಸಾಲ ಮರುಪಾವತಿಗಾಗಿ 475 ಕೋಟಿ ರೂ., ದೀರ್ಘಾವಧಿಯ ಕಾರ್ಯನಿರತ ಬಂಡವಾಳಕ್ಕಾಗಿ 360 ಕೋಟಿ ರೂ ಮತ್ತು ಇತರ ಕಾರ್ಪೊರೇಟ್ ಉದ್ದೇಶಗಳಿಗಾಗಿ ಉಳಿದ ಮೊತ್ತವನ್ನು ಬಳಸಲಿದೆ.
ನ್ಯೂ ಸ್ವಾನ್ ಮಲ್ಟಿಟೆಕ್: ಈ ಐಪಿಒ 11ರಿಂದ 15ರ ನಡುವೆ 33.11 ಕೋಟಿ ರೂ ಸಂಗ್ರಹಿಸುವ ಗುರಿಯೊಂದಿಗೆ ನಡೆಯಲಿದೆ. ಪ್ರತಿ ಷೇರಿನ ನೀಡಿಕೆ ಬೆಲೆಯನ್ನು 62-66 ರೂ.ಗೆ ನಿಗದಿಪಡಿಸಲಾಗಿದೆ. ಐಪಿಒ ಸಂಪೂರ್ಣವಾಗಿ ತಾಜಾ ಷೇರುಗಳ ವಿತರಣೆಯ ಮೂಲಕ ಇರುತ್ತದೆ. ಕಂಪನಿಯು ಸಂಗ್ರಹಿಸಿದ ನಿಧಿಯ ಒಂದು ಭಾಗವನ್ನು ಲೂಧಿಯಾನದ ಉತ್ಪಾದನಾ ಘಟಕಕ್ಕೆ ಯಂತ್ರೋಪಕರಣಗಳಿಗೆ ಬಳಸಲಾಗುವುದು. ಉಳಿದವು ಸಾಲ ಮರುಪಾವತಿ, ದುಡಿಯುವ ಬಂಡವಾಳ ಮತ್ತು ಸಾಮಾನ್ಯ ಕಾರ್ಪೊರೇಟ್ ಅಗತ್ಯಗಳಿಗಾಗಿ ಬಳಸುತ್ತದೆ.
ಆಸ್ಟ್ರೇಲಿಯನ್ ಪ್ರೀಮಿಯಂ ಸೋಲಾರ್: ಮೊನೊಕ್ರಿಸ್ಟಲಿನ್ ಮತ್ತು ಪಾಲಿಕ್ರಿಸ್ಟಲಿನ್ ಸೋಲಾರ್ ಮಾಡ್ಯೂಲ್‌ಗಳನ್ನು ತಯಾರಿಸುವ ಈ ಕಂಪನಿಯು 28 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯೊಂದಿಗೆ ಐಪಿಒಗೆ ಬರುತ್ತಿದೆ. ಇದರ ಇಶ್ಯೂ ಈ ತಿಂಗಳ 11ರಿಂದ 15ರವರೆಗೆ ನಡೆಯಲಿದೆ. ಪ್ರತಿ ಷೇರಿಗೆ 51-54 ರೂ ದರ ನಿಗದಿಪಡಿಸಿದೆ. ಸಂಪೂರ್ಣವಾಗಿ ತಾಜಾ ಷೇರುಗಳನ್ನು ನೀಡಲಾಗುತ್ತದೆ. ಈ ಹಣವನ್ನು ಬಂಡವಾಳ ವೆಚ್ಚ, ಕಾರ್ಯನಿರತ ಬಂಡವಾಳ ಮತ್ತು ಸಾಮಾನ್ಯ ಕಾರ್ಪೊರೇಟ್ ಅಗತ್ಯಗಳಿಗಾಗಿ ಬಳಸಿಕೊಳ್ಳುತ್ತದೆ.
IBL ಫೈನಾನ್ಸ್: ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಸ್‌ಎಂಇ) ವಿಭಾಗದಲ್ಲಿ ಈ ವರ್ಷ ಬರುತ್ತಿರುವ ಮೊದಲ ಐಪಿಒ. ಇದರ ಇಶ್ಯೂ ಈ ತಿಂಗಳ 9ರಿಂದ 11ರ ನಡುವೆ ಇರುತ್ತದೆ. ಐಪಿಒ 33.4 ಕೋಟಿ ರೂ. ನಿಧಿಸಂಗ್ರಹದ ಗುರಿಯೊಂದಿಗೆ ಬರುತ್ತಿದೆ. ಪ್ರತಿ ಷೇರಿನ ಬೆಲೆ 51 ರೂ. ಆಗಿದ್ದು, 65.5 ಲಕ್ಷ ಈಕ್ವಿಟಿ ಷೇರುಗಳನ್ನು ಹೊಸದಾಗಿ ನೀಡಲಾಗುತ್ತದೆ. ಭವಿಷ್ಯದ ವರ್ಕಿಂಗ್ ಕ್ಯಾಪಿಟಲ್ ಅಗತ್ಯಗಳಿಗಾಗಿ ಐಪಿಒ ನಿಧಿ ಬಳಸಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ಅಂಬಾನಿ ಹಿಂದಿಕ್ಕಿದ ಗೌತಮ್ ಅದಾನಿ ಮತ್ತೆ ಏಷ್ಯಾದ ನಂ.1 ಶ್ರೀಮಂತ