ಸಿಡ್ನಿ (ಆಸ್ಟ್ರೇಲಿಯಾ): ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು, ಪೊಲೀಸರ ಮೇಲೆ ದಾಳಿ ಮಾಡಲು ಮುಂದಾದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯನ್ನು ಆಸ್ಟ್ರೇಲಿಯಾ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ಮೃತ ಭಾರತೀಯ ಪ್ರಜೆಯನ್ನು ತಮಿಳುನಾಡಿನ ಮೊಹಮದ್ ರಹಮತುಲ್ಲಾ ಸೈಯದ್ ಅಹ್ಮದ್ ಎಂದು ಗುರುತಿಸಲಾಗಿದೆ. ಇಲ್ಲಿನ ಆಬರ್ನ್‌ನಲ್ಲಿ ಬ್ರಿಡ್ಜಿಂಗ್ ವೀಸಾದಡಿ ಅಹ್ಮದ್ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಕ್ಲೀನರ್ ಮೇಲೆ ಮಾರಣಾಂತಿಕ ದಾಳಿ.. 32 ವರ್ಷದ ಭಾರತೀಯ ಪ್ರಜೆ ಮೊಹಮದ್ ರಹಮತುಲ್ಲಾ ಸೈಯದ್ ಅಹ್ಮದ್ ಅವರು ಮಂಗಳವಾರ ಮಧ್ಯರಾತ್ರಿ 12.03 ಕ್ಕೆ ಸಿಡ್ನಿಯ ಪಶ್ಚಿಮದಲ್ಲಿರುವ ಆಬರ್ನ್ ರೈಲು ನಿಲ್ದಾಣದಲ್ಲಿ 28 ವರ್ಷದ ಕ್ಲೀನರ್ ಒಬ್ಬರ ಮೇಲೆ ಚಾಕುವಿನಿಂದ ದಾಳಿ ಮಾಡಿ ಇರಿದಿದ್ದಾರೆ. ಐದು ನಿಮಿಷಗಳ ನಂತರ ಆಬರ್ನ್ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಅಲ್ಲಿ ಪೊಲೀಸರ ಮೇಲೆ ಚಾಕುವಿನಿಂದ ದಾಳಿಗೆ ಮುಂದಾಗಿದ್ದಾರೆ.
ಪೊಲೀಸರು ಬಂಧಿಸಲು ಬಂದಾಗ ದಾಳಿಗೆ ಯತ್ನ.. ಈ ವೇಳೆ ಪೊಲೀಸರು ಆತನನ್ನು ಬಂಧಿಸಲು ಪ್ರಯತ್ನಿಸಿದ್ದಾರೆ. ಆದರೆ, ಆತ ಚಾಕುವಿನಿಂದ ಪೊಲೀಸರ ಮೇಲೆಯೇ ದಾಳಿ ನಡೆಸಲು ಯತ್ನಿಸಿದ್ದಾನೆ. ಆತ್ಮ ರಕ್ಷಣೆಗಾಗಿ ಪೊಲೀಸರು ಆತನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದ ವ್ಯಕ್ತಿ ಕುಸಿದು ಬಿದ್ದಿದ್ದಾನೆ. ಅಲ್ಲಿದ್ದ ಅರೆವೈದ್ಯರು ಚಿಕಿತ್ಸೆ ನೀಡಿದ್ದಾರೆ. ಇದಾದ ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಾನಸಿಕ ಅಸ್ವಸ್ಥನಾಗಿದ್ದ ಭಾರತೀಯ ಪ್ರಜೆ: ಪೊಲೀಸರ ಗುಂಡೇಟಿಗೆ ಹತನಾದ ಭಾರತೀಯ ಪ್ರಜೆ ಮಾನಸಿಕ ಅಸ್ವಸ್ಥನಾಗಿರಬಹುದು ಎಂಬ ಶಂಕೆಯನ್ನು ಅಲ್ಲಿನ ಪೊಲೀಸರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆತನ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ. ಕ್ಲೀನರ್ಗೆ ಇರಿದ ಬಳಿಕ 5 ನಿಮಿಷಗಳ ನಂತರ ನೇರವಾಗಿ ಠಾಣೆಗೆ ಆಗಮಿಸಿ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದ. ಹೀಗಾಗಿ ಆತನ ಮಾನಸಿಕ ಸ್ಥಿತಿ ಬಗ್ಗೆ ಟ್ರ್ಯಾಕ್ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯು ಅತ್ಯಂತ ಗೊಂದಲ ಮತ್ತು ದುರದೃಷ್ಟಕರವಾಗಿದೆ. ಇದನ್ನು ವಿದೇಶಾಂಗ ಇಲಾಖೆ ಮತ್ತು NSW ಕಚೇರಿ ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳಿಗೆ ಔಪಚಾರಿಕ ಮಾಹಿತಿ ನೀಡಲಾಗಿದೆ. ಇಬ್ಬರು ಅಧಿಕಾರಿಗಳು ಪೊಲೀಸ್ ಠಾಣೆಯಿಂದ ಹೊರಬರಲು ಪ್ರಯತ್ನಿಸಿದಾಗ, ಅಹ್ಮದ್ ಅವರ ಮೇಲೆಯೇ ದಾಳಿ ನಡೆಸಲು ಮುಂದಾದ. ಹೀಗಾಗಿ ಆತನ ಮೇಲೆ ಗುಂಡು ಹಾರಿಸಲಾಗಿದೆ. ಎದೆಗೆ 2 ಗುಂಡುಗಳು ತಾಗಿವೆ ಎಂದು ಆಸ್ಟ್ರೇಲಿಯಾದ ಭಾರತೀಯ ಕಾನ್ಸುಲೇಟ್ ಜನರಲ್ ಮಾಹಿತಿ ನೀಡಿದರು.
ರೈಲ್ವೆ ನಿಲ್ದಾಣದಲ್ಲಿ ಇರಿತಕ್ಕೊಳಗಾದ ಕ್ಲೀನರ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರಿದಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದುಬಂದಿದೆ.
ಓದಿ: ಐದು ವರ್ಷಗಳ ಪ್ರೀತಿ, ಮದುವೆ ನಿರಾಕರಿಸಿದ ಯುವತಿ.. 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಂದ ಪಾಗಲ್ ಪ್ರೇಮಿ