ಜೈಪುರ : 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಅಪ್ರತಿಮ ಶೌರ್ಯ ಮೆರೆದಿದ್ದ ಬ್ರಿಗೇಡಿಯರ್ ರಘುವೀರ ಸಿಂಗ್ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರಿಗೆ 99ವರ್ಷ ವಯಸ್ಸಾಗಿತ್ತು.
ಟೋಂಕ್ ಜಿಲ್ಲೆಯ ಸೋಡಾ ಎಂಬ ಗ್ರಾಮದಲ್ಲಿ ನವೆಂಬರ್ 2, 1923ರಲ್ಲಿ ಜನಿಸಿದ್ದ ಬ್ರಿಗೇಡಿಯರ್ ರಘುವೀರ ಸಿಂಗ್ 18 ಏಪ್ರಿಲ್ 1946ರಂದು ಸವಾಯಿ ಮಾನ ಗಾರ್ಡ್ನಲ್ಲಿ ಸೆಕೆಂಡ್ ಲೆಫ್ಟಿನೆಂಟ್ ಆಗಿ ನಿಯೋಜನೆಗೊಂಡಿದ್ದರು. ಎರಡನೇ ಮಹಾಯುದ್ಧ ಸೇರಿದಂತೆ ಇನ್ನೂ ಹಲವಾರು ಯುದ್ಧಗಳಲ್ಲಿ ಇವರು ಹೋರಾಡಿದ್ದರು.
1944ರಲ್ಲಿ ಬರ್ಮಾ ಯುದ್ಧದಲ್ಲಿ ಪಾಲ್ಗೊಂಡಿದ್ದ ಇವರು ಹೋರಾಡಲು ಜಪಾನಿಗೆ ತೆರಳಿದ್ದರು. ಇದಾಗಿ ಕೆಲ ದಿನಗಳ ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ 1947-48ರಲ್ಲಿ ನಡೆದ ಭಾರತ-ಪಾಕ್ ಯುದ್ಧದಲ್ಲಿ ಹೋರಾಡಿದ್ದರು. 1954ರಲ್ಲಿ ಉತ್ತರ-ದಕ್ಷಿಣ ಕೊರಿಯಾ ಯುದ್ಧದ ಸಂದರ್ಭದಲ್ಲಿ ನಿಯೋಜಿಸಲಾಗಿದ್ದ ಶಾಂತಿಪಾಲನಾ ಪಡೆಯಲ್ಲಿ ರಾಷ್ಟ್ರ ಪ್ರತಿನಿಧಿ ಆಯೋಗದ ಅಧ್ಯಕ್ಷರಾಗಿ ಇವರು ಸೇವೆ ಸಲ್ಲಿಸಿದ್ದರು.
1958-59ರಲ್ಲಿ ನಡೆದ ಇಸ್ರೇಲ್ ಹಾಗೂ ಜರ್ಮನಿ ಯುದ್ಧದ ಸಮಯದಲ್ಲಿ ಇವರು ವಿಶ್ವಸಂಸ್ಥೆಯ ತುರ್ತು ಸೈನಿಕ ಪಡೆಯಲ್ಲಿ ಕೆಲಸ ಮಾಡಿದ್ದರು. 1965ರಲ್ಲಿ ಭಾರತ-ಪಾಕ್ ಯುದ್ಧದಲ್ಲಿ 18 ರಾಜಪುತಾನಾ ರೈಫಲ್ಸ್ ತುಕಡಿಯ ಮುಂದಾಳತ್ವ ವಹಿಸಿದ್ದ ರಘುವೀರ ಸಿಂಗ್, ಪಾಕಿಸ್ತಾನದ 22 ಪೈಂಟನ್ ಯುದ್ಧ ಟ್ಯಾಂಕ್ಗಳನ್ನು ಧ್ವಂಸಗೊಳಿಸಿ ಅದ್ಭುತ ಪರಾಕ್ರಮ ತೋರಿದ್ದರು.
ಲೆಫ್ಟಿನೆಂಟ್ ಕರ್ನಲ್ ಆಗಿದ್ದಾಗ ಆಗಿನ ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್ ಅವರಿಂದ ದೇಶದ ಎರಡನೇ ಅತ್ಯುನ್ನತ ವೀರ ಪುರಸ್ಕಾರವಾದ ಮಹಾವೀರ ಚಕ್ರ ಪದಕವನ್ನು ಇವರು ಪಡೆದಿದ್ದರು.